ಚಿಕ್ಕಮಗಳೂರು: ಸಮುದಾಯ ಭವನಗಳ ಅಭಿವೃದ್ಧಿಗೆ ಬಳಕೆ ಮಾಡಬೇಕಾಗಿರುವ ಹಣವನ್ನು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸುವಂತೆ ನಗರಸಭೆ ಸದಸ್ಯೆ ಶ್ಯಾಮಲಾ ಅವರ ಸಲಹೆಯನ್ನು ಕಾಂಗ್ರೆಸ್ ಮುಖಂಡ ಹಿರೇಮಗಳೂರು ರಾಮಚಂದ್ರ ಖಂಡಿಸಿದ್ದಾರೆ. ಇತ್ತೀಚೆಗೆ ನಗರಸಭೆಯಲ್ಲಿ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಶ್ಯಾಮಲಾ ಅವರು, ಅರ್ಧಕ್ಕೆ ನಿಂತಿರುವ ಸಮುದಾಯ ಭವನಗಳು ಪೂರ್ಣಗೊಳಿಸಲು ಬಂದಿರುವ ಹಣವನ್ನು ಅದಕ್ಕೆ ನೀಡುವ ಬದಲು ನಗರದ ರಸ್ತೆಗಳ ದುರಸ್ತಿಗೆ ಬಳಸಿ ಎಂದು ಹೇಳಿರುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಪರಿಜ್ಞಾನವಿಲ್ಲದಂತೆ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆಂದು ತಿಳಿಸಿದ್ದಾರೆ. ಶೇ. 22.75 ರ ಹಣವನ್ನು ಪರ್ಯಾಯ ಕೆಲಸಗಳಿಗೆ ವಿನಿಯೋಗಿಸದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂತಹ ಅಚಾತುರ್ಯಗಳು ನಡೆದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆಗ್ರಹಿಸಿ ಕಾನೂನು ಮೊರೆ ಹೋಗ ಬೇಕಾಗುತ್ತದೆ ಎಂದು ರಾಮಚಂದ್ರ ಎಚ್ಚರಿಸಿದ್ದಾರೆ.
ಪ್ರತಿಭಟನೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಹೆಚ್ಚುವರಿ ಸೀಟುಗಳನ್ನು ನಿಗದಿ ಮಾಡುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಸೋಮವಾರ ಶಂಕರಘಟ್ಟ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಪ್ರಭಾರ ಕುಲಪತಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಜ್ಞಾನ ಸಹ್ಯಾದ್ರಿಯಲ್ಲಿ ಭೌತಶಾಸ್ತ್ರ 33, ಗಣಿತ ಶಾಸ್ತ್ರ 46, ರಸಾಯನ ಶಾಸ್ತ್ರಕ್ಕೆ ಕಡೂರು, ಸಹ್ಯಾದ್ರಿ ಕಾಲೇಜು, ಶಂಕರಘಟ್ಟ ಸೇರಿ 87, ಅರ್ಥಶಾಸ್ತ್ರ ವಿಭಾಗದಲ್ಲಿ 95 ಸೀಟುಗಳಿವೆ. ಈ ವಿಭಾಗಗಳಿಗೆ ಇನ್ನಷ್ಟು ಬೇಡಿಕೆ ಇದೆ. ಆದರೂ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳುತ್ತಿಲ್ಲ.
ಎಂಕಾಂ ಹಾಗೂ ಎಂಎಸ್ ಡಬ್ಲೂ ಕೋರ್ಸ್‌ಗೆ ಬೇಡಿಕೆ ಇದ್ದರೂ ಸಾಕಷ್ಟು ಸೀಟುಗಳಿಲ್ಲ.
ಆದರೆ ಖಾಸಗಿ ಕಾಲೇಜುಗಳಿಗೆ ಎಂ.ಕಾಂ ತರಗತಿ ನಡೆಸಲು ಅವಕಾಶ ಕೊಡುತ್ತಿದೆ. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಭರಿಸಬೇಕಾಗಿದೆ. ಆದ್ದರಿಂದ ವಿಶ್ವವಿದ್ಯಾಲಯವು ಕೂಡಲೇ ಹೆಚ್ಚುವರಿ ಸೀಟುಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
Advertisement