ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಕೈಮರದ ಮನೆಯಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ಹಾಗೂ ನಗದನ್ನು ಶನಿವಾರ ರಾತ್ರಿ ಕಳವು ಮಾಡಿದ್ದು, ಘಟನೆ ನಡೆದ ಒಂದೇ ದಿನದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಳಿಕೊಪ್ಪ ಕೈಮರದ ನಿವಾಸಿ ವ್ಯಾಪಾರಿ ರವೀಂದ್ರ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಶನಿವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲಿನಿಂದ ಒಳಗೆ ನುಗ್ಗಿ ಬೀರುವಿನಲ್ಲಿಟ್ಟಿದ್ದ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನ ಹಾಗೂ ಹಣ ಕಳವು ಮಾಡಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಗೆ ದೂರು ನೀಡಲಾಗಿತ್ತು.
ನರಸಿಂಹರಾಜಪುರ ವೃತ್ತ ನಿರೀಕ್ಷಕ ಸದಾನಂದ್, ಠಾಣಾಧಿಕಾರಿ ಕೆ.ಆರ್. ರಘು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಎಸ್ಪಿ ಆರ್. ಚೇತನ್ ಹಾಗೂ ಕೊಪ್ಪ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು, ಅನುಮಾನದ ಮೇಲೆ ಅದೇ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಅರಳಿಕೊಪ್ಪ ಗ್ರಾಮದ ಸಿಪ್ರಿನ್ ಲೋಬೋ ಹಾಗೂ ಹರೀಶ್ ಆರೋಪಿಗಳಾಗಿದ್ದು, ಮನೆಯವರ ಚಲನವಲನ ಪ್ರತಿನಿತ್ಯ ಗಮನಿಸಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ವಶಕ್ಕೆ ಪಡೆದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನರಸಿಂಹರಾಜಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಳವು ಮಾಡಿದ್ದ 125 ಗ್ರಾಂ. ಚಿನ್ನ ಹಾಗೂ ರು. 26 ಸಾವಿರ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಘಟನೆ ನಡೆದ ಒಂದು ದಿನದೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
Advertisement