ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನಧಿಕೃತವಾಗಿ ಕಲ್ಲು ಮತ್ತು ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶೇಖರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಅನಧಿಕೃತ ಕಟ್ಟಡ ಕಲ್ಲು, ಸಾಮಾನ್ಯ ಮರಳು ಗಣಿಗಾರಿಕೆ, ಸಾಗಾಣಿಕೆ ಅನಧಿಕೃತ ಸ್ಪೋಟಕಗಳ ಬಳಕೆ ಮತ್ತು ಫಿಲ್ಟರ್ ಮರಳು ಉತ್ಪಾದನೆ ನಿಯಂತ್ರಣ ಕುರಿತು ಮಂಗಳವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಕ್ರಮ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಅನಧಿಕೃತವಾಗಿ ಸ್ಪೋಟಕಗಳನ್ನು ಬಳಸುವುದು ಸೇರಿದಂತೆ ಫಿಲ್ಟರ್ ಮರಳು ಉತ್ಪಾದನೆ ಬಗ್ಗೆ ಸಾಕಷ್ಟು ದೂರು ಕೇಳಿ ಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವೈಜ್ಞಾನಿಕವಾಗಿ ಸ್ಫೋಟಕ: ಕಟ್ಟಡದ ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ ಕಾಯ್ದೆ ಪ್ರಕಾರ ಅನುಮತಿ ಪಡೆಯದೇ ಅವೈಜ್ಞಾನಿಕವಾಗಿ ಸ್ಫೋಟಕ ಬಳಸುತ್ತಿದ್ದವರ ಮೇಲೆ ಪೊಲೀಸ್ ಅಧಿಕಾರಿಗಳು ಮೊಕದ್ದಮೆ ದಾಖಲಿಸುವಂತೆ ತಿಳಿಸಿದರು.
ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ನಿಯಂತ್ರಣಕ್ಕೆ ಜಿಲ್ಲೆಯ ಆಯಾಕಟ್ಟಿನ ಜಾಗಗಳಲ್ಲಿ ತನಿಖಾ ಠಾಣೆಗಳನ್ನು ಹಾಗೂ ಸಂಚಾರಿ ದಳಗಳನ್ನು ಸ್ಥಾಪಿಸಬೇಕೆಂದರು.
ಸಾರ್ವಜನಿಕರು ಮನೆ ಕಟ್ಟಲು ಹಾಗೂ ಮತ್ತಿತರ ಕಾಮಗಾರಿಗಳಿಗೆ ಅಗತ್ಯ ಅನುಗುಣವಾಗಿ ಮರಳು ಲಭ್ಯವಾಗುವಂತೆ ಕ್ರಮ ವಹಿಸಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಡೂರು ತಾ. ವ್ಯಾಪ್ತಿಯ ಬ್ರಹ್ಮ ಸಮುದ್ರ ರಕ್ಷಿತಾರಣ್ಯ ಪ್ರದೇಶದ ಅಗ್ರಹಾರ, ಚಟ್ನಪಾಳ್ಯ, ಎಸ್. ಬಿದರೆ ಹಾಗೂ ಪಂಚನಹಳ್ಳಿ ಗ್ರಾಮಗಳ ಸುತ್ತಮುತ್ತ ಬಿಳಿಕಲ್ಲು ಖನಿಜದ ಗಣಿಗಾರಿಕೆ ನಡೆಸದಂತೆ ಎಚ್ಚರವಹಿಸಬೇಕು. ಇವುಗಳ ನಿಯಂತ್ರಣಕ್ಕೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಿ ಅಗತ್ಯ ಕ್ರಮಕೈಗೊಳ್ಳ ಬೇಕೆಂದರು.
ವಿಸ್ತೀರ್ಣದ ವಿವರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮಾತನಾಡಿ, ಗಣಿಗಾರಿಕೆ ಗುತ್ತಿಗೆ ನೀಡಲಾಗಿರುವ ಗುತ್ತಿಗೆಯ ವಿಸ್ತೀರ್ಣದ ಬಗ್ಗೆ ಗಣಿಗಾರಿಕೆ ಸ್ಥಳದಲ್ಲಿ ಪ್ರದರ್ಶಿಸ ಬೇಕೆಂದರು.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮಾತನಾಡಿ, ಅನಧಿಕೃತ ಗಣಿ ಚಟುವಟಿಕೆಗಳ ನಿಯಂತ್ರಣವನ್ನು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ತಪ್ಪಿದಲ್ಲಿ ಅಂತಹವರನ್ನು ಭಾದ್ಯಸ್ತರನ್ನಾಗಿ ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ. ಪಾಟೀಲ್, ಉಪ ವಿಭಾಗಾಧಿಕಾರಿ ಅನುರಾಧ, ಕೆ. ಚನ್ನಬಸಪ್ಪ, ಲೋಕಾಯುಕ್ತ ಡಿವೈಎಸ್‌ಪಿ. ಹುಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ತಾಲೂಕು ತಹಸೀಲ್ದಾರ್, ಗಣಿ ಮತ್ತು ಭೂ ವಿಜ್ಞಾನಾಧಿಕಾರಿ ಕೋದಂಡರಾಮಯ್ಯ ಮತ್ತಿರರು ಉಪಸ್ಥಿತರಿದ್ದರು.
Advertisement