ಚಿಕ್ಕಮಗಳೂರು: ತಾಲೂಕಿನ ಈಶ್ವರಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಕರವೇ ಜಿಲ್ಲಾ ಅಧ್ಯಕ್ಷ ತೇಗೂರು ಜಗದೀಶ್ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈಶ್ವರಹಳ್ಳಿಯ ಸರ್ವೆ ನಂಬರ್ 280, 256 ರಲ್ಲಿ 216 ಎಕರೆ ಗೋಮಾಳ ಜಾಗ ಇದ್ದು, ಇದರಲ್ಲಿ 10 ವರ್ಷಗಳ ಹಿಂದೆ 8 ಎಕರೆ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಕಳಸಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಬಾರದೆ ಜನರು ಕಂಗಾಲಾಗಿದ್ದಾರೆ.
ಈ ಪ್ರದೇಶದಲ್ಲಿ 8 ಎಕರೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದು, 70 ಎಕರೆ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ವಂಚಿಸಲಾಗುತ್ತಿದೆ. ಇಲ್ಲಿ ನಡೆಯುತ್ತಿರು ಕಲ್ಲು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೆ ಹೋದರೆ ಕರವೇಯಿಂದ ಗಣಿಗಾರಿಕೆ ನಿಲ್ಲಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರವೇ ಮುಖಂಡ ಪಂಚಾಕ್ಷರಿ, ವಸಂತಕುಮಾರ್, ಕೆಂಪನಹಳ್ಳಿ ಅಶೋಕ್ ಹಾಗೂ ಕಾರ್ಯಕರ್ತರು ಇದ್ದರು.
Advertisement