ಚಿಕ್ಕಮಗಳೂರು: ಮಂತ್ರಮುಗ್ಧವಾಗಿಸುವ ಮಾತುಗಾರಿಕೆ, ಸತ್ವಯುತವಾದ ಸಾಹಿತ್ಯ, ಅಚ್ಚುಕಟ್ಟಾದ ಸಂಘಟನಾ ಚಾತುರ್ಯ ಚಂದ್ರಯ್ಯ ನಾಯ್ಡು ವೈಶಿಷ್ಟ್ಯ ಎಂದು ಕುಪ್ಪೂರು ಗದ್ದುಗೆ ಮಠಾಧ್ಯಕ್ಷ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪ್ರೊ. ಚಂದ್ರಯ್ಯ ನಾಯ್ಡು ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಟ್ರಸ್ಟ್ ಸೋಮವಾರ ಸಂಜೆ ನಗರದ ಆಶಾಕಿರಣ ಶಾಲೆಯಲ್ಲಿ ಚಂದ್ರಯ್ಯ ನಾಯ್ಡು 3ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ನಿಮದೇ ನೆನಪು ದಿನವೂ ಮನದಲ್ಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀಚನ ನೀಡಿದರು.
ಮಾನವೀಯ ಮೌಲ್ಯಗಳು, ವಿಶಾಲವಾದ ಹೃದಯವಂತಿಕೆ ರೂಢಿಸಿಕೊಳ್ಳಬೇಕು. ಬಡತನ, ಸಿರಿತನ ಯಾರಿಗೂ ಶಾಶ್ವತವಲ್ಲ. ಇದಕ್ಕಾಗಿ ಹಿಗ್ಗು- ಕುಗ್ಗು ಸಲ್ಲದು. ಕೀರ್ತಿ- ಅಪಕೀರ್ತಿ ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಕಲೆ ಮತ್ತು ಸಾಹಿತ್ಯ ದೇವರು ಕೊಟ್ಟ ವರವಾದರೆ, ಮುಪ್ಪು ಮತ್ತು ಸಾವು ಕರೆಯದೆ ಬರುವ ಅವಸ್ಥೆಗಳು. ವ್ಯಕ್ತಿ ಇಲ್ಲದಾಗಲೇ ಅವರ ಬೆಲೆ ಗೊತ್ತಾಗುತ್ತದೆ. ಆಗ ಚಿಂತೆ ಮಾಡುವ ಅವರು ಬದುಕಿದ್ದಾಗಲೇ ಚಿಂತನೆ ಮಾಡುವುದು ಒಳಿತು ಎಂದರು.
ಹಳಸೆ ಶಿವಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರೀಯ ವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ. ಭಾಗ್ಯ ಮಾತನಾಡಿದರು. ಕಲಾಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಆಶಾಕಿರಣದ ಕಾರ್ಯದರ್ಶಿ ನಜರುಲ್ಲಾ ಷರೀಫ್, ಟ್ರಸ್ಟ್ ಮುಖ್ಯಸ್ಥೆ ವಾಣಿ ನಾಯ್ಡು ಪಾಲ್ಗೊಂಡಿದ್ದರು. ಟ್ರಸ್ಟಿ ಎಚ್.ಸಿ. ಮಹೇಶ್ ಸ್ವಾಗತಿಸಿ ಪ್ರಾಸ್ತಾವಿಸಿದ್ದು, ಲಕ್ಷ್ಮಣ ಕುಮಾರ್ ವಂದಿಸಿದರು. ಕಲ್ಕಟ್ಟೆ ನಾಗರಾಜರಾವ್ ನಿರೂಪಿಸಿದರು. ವಿದ್ಯಾರ್ಥಿಗಳಾದ ಮಲ್ಲೇಶ್ ಪ್ರಾರ್ಥಿಸಿದ್ದು, ಹರೀಶ್ ಸ್ವರಚಿತ ಕವನ, ನೂತನಕುಮಾರನ ಸ್ಮರಣೆಯ ಮಾತುಗಳು ಗಮನ ಸೆಳೆದವು.
ಕೊಪ್ಪದ ನಾದಬ್ರಹ್ಮ ಎಂ.ಕೆ. ಶ್ರೀನಿಧಿ ನೇತೃತ್ವದ ಸಾಧ್ವಿನಿ, ದರ್ಶನ್, ನಾಗರಾಜರಾವ್, ಭಾರ್ಗವ ಮತ್ತು ದಂಡಾವತಿ ಅವರನ್ನೊಳಗೊಂಡ ತಂಡ ಪ್ರಸ್ತುತಪಡಿಸಿದ ಗಾನ ವೈವಿಧ್ಯ ನಾಯ್ಡು ಮೆಚ್ಚಿನ ಗೀತಗಾಯನ ಜನಮನಸೆಳೆಯಿತು.
Advertisement