ಕೊಪ್ಪ: ತಾಲೂಕಿನ ಬಸ್ರೀಕಟ್ಟೆ ಪಟ್ಟಣದಲ್ಲಿ ಭೂ ಕುಸಿತ ಮುಂದುವರೆದಿದ್ದು, ಮುಖ್ಯರಸ್ತೆಯ ಅಂಚಿನಲ್ಲೆ ನಿವೇಶನ 25 ಅಡಿ ಆಳಕ್ಕೆ ಕುಸಿದಿದೆ.
ಇದರಿಂದ ಅಕ್ಕ ಪಕ್ಕದ ಎರಡು ಕಟ್ಟಡಗಳಿಗೆ ಹಾನಿ ಉಂಟಾಗುವ ಆತಂಕ ಎದುರಾಗಿದ್ದು, ಕಟ್ಟಡ ಮಾಲೀಕರು ತೆರವು ಕಾರ್ಯ ಕೈಗೊಂಡಿದ್ದಾರೆ. ಚನ್ನೇಕಲ್ಲಿನಲ್ಲಿ ಕಳೆದ ವರ್ಷ ಭೂ ತಡೆ ಪರಿಹಾರವಾಗಿ ನಿರ್ಮಿಸಿದ್ದ ದಂಡೆಯಲ್ಲೂ ಬಿರುಕು ಕಾಣಿಸಿಕೊಂಡಿದೆ.
ಮಳೆ ತೀವ್ರಗೊಂಡರೆ ಇನ್ನಷ್ಟು ಭೂ ಕುಸಿತ ಉಂಟಾಗಬಹುದು. ಪಟ್ಟಣದ ಕಾಂಕ್ರಿಟ್ ರಸ್ತೆಯ ಅಂಚಿನವರೆಗೆ ಇದೇ ಮೊದಲ ಭೂ ಕುಸಿತ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
11ನೇ ಚಲನಚಿತ್ರ ಶಿಬಿರ
ಕೊಪ್ಪ; ತಾಲೂಕಿನ ಗಡಿ ಗ್ರಾಮ ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಹೇಮಾಂಗಣದಲ್ಲಿ ಆ. 9 ಮತ್ತು 10 ರಂದು ಸಾಂಗತ್ಯ ಸಂಸ್ಥೆಯಿಂದ 11ನೇ ಚಲನಚಿತ್ರ ಶಿಬಿರ ಏರ್ಪಡಿಸಿದೆ. ಕುವೆಂಪು ಪ್ರತಿಷ್ಠಾನ ಸಹಕಾರದೊಂದಿಗೆ ನಡೆಯುವ ಶಿಬಿರದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನ ಚಿತ್ರ ಪ್ರದರ್ಶನ ಮತ್ತು ಅವುಗಳ ಬಗ್ಗೆ ವಿಮರ್ಶೆ ನಡೆಯಲಿದೆ. ಶಿಬಿರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ, ಸಾಂಗತ್ಯ ಸಂಸ್ಥೆಯ ಅಧ್ಯಕ್ಷ ಪರಮೇಶ್ವರ ಗುರುಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದು, ಭಾಗವಹಿಸಲಿಚ್ಚಿಸುವವರು ಮೊ .9448245172 ಸಂಪರ್ಕಿಸಲು ಕೋರಲಾಗಿದೆ.
Advertisement