ಶೀತಲೀಕರಣ ಕೇಂದ್ರ ರೈತರ ಸೇವೆಗೆ ಸಿದ್ಧ

Published on

ಕಡೂರು: ಬಯಲು ಪ್ರದೇಶದ ರೈತರ ಕೃಷಿ ಉತ್ಪನ್ನಗಳ ರಕ್ಷಣೆ ಹಾಗು ತಕ್ಕ ಬೆಲೆ ಸಿಗುವವರೆಗೂ ಕೆಡದಂತೆ ಇಡಲು ಚಿಕ್ಕಮಗಳೂರು ಜಿಲ್ಲೆಯಲ್ಲೇ ಪ್ರಥಮವಾಗಿ ಕಡೂರು ತಾಲೂಕು ಕೇಂದ್ರದಲ್ಲಿ ಶೀತಲೀಕರಣ ಕೇಂದ್ರ (ಕೋಲ್ಡ್ ಸ್ಟೋರೇಜ್) ರೈತರ ಸೇವೆಗೆ ಸಿದ್ಧವಾಗಿದೆ.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಅನಿವಾರ್ಯ ಎಂಬ ಸಂಸ್ಥೆ ಬ್ಯಾಂಕ್ ಸಾಲ ಸೇರಿದಂತೆ ಸ್ವಂತ ಬಂಡವಾಳದಿಂದ ಸುಮಾರು 2.99 ಕೋಟಿ ರು. ವೆಚ್ಚದಲ್ಲಿ ಈ ಶೀತಲೀಕರಣ ಕೇಂದ್ರ ಆರಂಭಿಸಿದೆ.   
ಕಡಿಮೆ ಬೆಲೆಗೆ ಕೊಟ್ಟರೆ ರೈತನಿಗೆ ನಷ್ಟ. ಆದರೆ ಕೆಲವು ದಿನವಾದರೂ ತಮ್ಮ ಉತ್ಪನ್ನಗಳನ್ನು ಈ ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟು ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ.
ಜಿಲ್ಲೆಯಲ್ಲೇ ವಿನೂತನ ಪ್ರಯತ್ನ:  ಶೀತಲೀಕರಣ ಕೇಂದ್ರವನ್ನು ಅನಿವಾರ್ಯ ಎಂಬ ಸಂಸ್ಥೆ ಆರಂಭಿಸಿದೆ. ಇಡೀ ಜಿಲ್ಲೆಯಲ್ಲೇ ಇದು ವಿನೂತನ ಪ್ರಯತ್ನವಾಗಿದ್ದು ಹಲವು ಸಲ ಸರ್ಕಾರದಿಂದ ಇಂತಹ ಘಟಕಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಸರ್ಕಾರ ಕಡೂರಿನಲ್ಲಿ ಇದರ ನಿರ್ಮಾಣಕ್ಕೆ ಮುಂದಾಗಲಿಲ್ಲ.
ಇದೀಗ ಇಂತಹ ಪ್ರಯತ್ನ ನಡೆದಿರುವುದು ಇಡೀ ಜಿಲ್ಲೆಯಲ್ಲೇ ಮೊದಲನೆಯದು.  ಘಟಕದ ತಾಂತ್ರಿಕ ಸಲಹೆಗಾರ ಬಿ.ನಾಗಭೂಷಣ್ ಈ ಬಗ್ಗೆ ವಿವರ ನೀಡಿ, ನಮ್ಮ ಕಂಪನಿಯಿಂದ ರೈತರ ಶ್ರೇಯೋಭಿವೃದ್ಧಿಗಾಗಿ ಶೀಥಲೀಕರಣ ಗೃಹ ನಿರ್ಮಿಸಿದೆ. ರೈತರು ತರಕಾರಿ ಹಣ್ಣುಗಳನ್ನು ಬೆಳೆಸಿ ಬೆಲೆ ಸಿಕ್ಕದಾಗ ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡುವುದನ್ನು ನೋಡಿ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದರು.
ಘಟಕದ ಕಾರ್ಯ ನಿರ್ವಹಣಾ ನಿರ್ದೇಶಕಿ ಜಿ.ಟಿ.ಮಂಗಳಾ ನಾಗಭೂಷಣ್ ಮಾತನಾಡಿ, ರೈತರು ಬೆಳೆದ ಹಣ್ಣು ತರಕಾರಿ ಮತ್ತು ಇತರೆ ಪದಾರ್ಥಗಳನ್ನು ರೈತರಿಗೆ ಹೊರೆಯಾಗದಂತೆ ಕಡಿಮೆ ದರದಲ್ಲಿ ಸಂರಕ್ಷಿಸಲಾಗುವುದು ಎಂದರು.
ರು. 25 ಲಕ್ಷ ಸಹಾಯ ಧನ: ಈ ಭಾಗದ ರೈತರಿಗೆ ಇದು ತೀರಾ ಅವಶ್ಯತೆಯಿದ್ದು, ಇದೊಂದು ಉತ್ತಮ ಪ್ರಯತ್ನವಾಗಿದೆ. ಸರ್ಕಾರದಿಂದ 25 ಲಕ್ಷ ರು. ಸಹಾಯ ಧನ ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಶಶಿಕಲಾ ಹೇಳಿದರು. ಎಪಿಎಂಸಿ ಅಧ್ಯಕ್ಷ ಗೋವಿಂದಪ್ಪ, ನಿರ್ದೇಶಕ ಯರದಕೆರೆ ಎಂ.ರಾಜಪ್ಪ, ಸತೀಶ್, ಎಲ್.ಪುಟ್ಟಕರಿಯಪ್ಪ, ಜಿ.ಸೂರಿ, ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.
-ಕಡೂರು ಕೃಷ್ಣಮೂರ್ತಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com