ಬಾಳೆಹೊನ್ನೂರು: ಅಧಿಕಾರಿಗಳ ಗೈರು ಹಾಜರಿಯಿಂದ ಅಕ್ರೋಶಗೊಂಡ ಗ್ರಾಮಸ್ಥರು ಗ್ರಾಮಸಭೆ ನಡೆಸಬಾರದೆಂದು ಪಟ್ಟುಹಿಡಿದಾಗ ಗ್ರಾಮಸಭೆ ಮುಂದೂಡಿದ ಘಟನೆ ಇಲ್ಲಿನ ಬಿ.ಕಣಬೂರು ಗ್ರಾಪಂನಲ್ಲಿ ನಡೆದಿದೆ.
ಬಿ.ಕಣಬೂರು ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಮೊದಲನೇ ಸುತ್ತಿನ ಗ್ರಾಮಸಭೆಯ ಬಗ್ಗೆ ಮಾಹಿತಿ ನೀಡಿ ಪ್ರಾರಂಭಿಸಿರುವಷ್ಟರಲ್ಲಿ ಗ್ರಾಮಸ್ಥರು ಎಲ್ಲಾ ಅಧಿಕಾರಿಗಳು ಬಂದಿದ್ದಾರೆಯೇ ಎಂದು ಅಧ್ಯಕ್ಷರು ಹಾಗೂ ನೋಡಲ್ ಅಧಿಕಾರಿಯನ್ನು ಪ್ರಶ್ನಿಸಿದಾಗ ಕೆಲವೇ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ. ಬಾರದೇ ಇರುವ ಅಧಿಕಾರಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೋಟಿಸ್ ಜಾರಿ ಮಾಡಲಾಗುವುದೆಂದು ಉತ್ತರಿಸಿದರು.
ಈ ಉತ್ತರಕ್ಕೆ ತೃಪ್ತಿ ಪಡದ ಗ್ರಾಮಸ್ಥರು ಕಳೆದ ಗ್ರಾಮಸಭೆಯಲ್ಲಿ ಅಧಿಕಾರಿಗಳ ಬಾರದೇ ಇದ್ದು, ಬಾರದೇ ಇರುವ ಅಧಿಕಾರಿಗಳ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ ಹಾಗೂ ಕಳೆದ ಸಭೆಯಲ್ಲಿ ತೆಗದುಕೊಂಡ ನಿರ್ಣಯ ಅನುಷ್ಟಾನಗೊಂಡಿದೆಯೇ ಎಂದು ಪ್ರಶ್ನಿಸಿದರು.
ಉತ್ತರ ಕೊಡಲಾಗದ ಅಧಿಕಾರಿಗಳು ಸಭೆ ನಡೆಸಲು ಮುಂದಾದರು ಅಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಕೂಲಿ ಕಾರ್ಮಿಕರು, ಬಡ ಜನರು ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ನಿಮ್ಮಿಂದ ಸಾಧ್ಯವೇ ಎಂದು ಸವಾಲು ಹಾಕಿದರು.
ಸಣ್ಣಪುಟ್ಟ ಸಮಸ್ಯೆಗಳನ್ನು ಪಂಚಾಯತ್ ಬಗೆಹರಿಸಬಹುದು ಆದರೆ ಬೇರೆ ಇಲಾಖೆಯಿಂದ ಆಗಬೇಕಾದ ಕೆಲಸವನ್ನು ಆಯಾ ಇಲಾಖೆಯ ಅಧಿಕಾರಿಗಳೇ ನಡೆಸಿಕೊಡಬೇಕು. ಈ ನಿಟ್ಟಿನಲ್ಲಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಕಡ್ಡಾಯವಾಗಿ ಬರಬೇಕೆಂದು ಗ್ರಾ.ಪಂ. ಸದಸ್ಯರು ಗ್ರಾಮಸ್ಥರ ಮನವಿಗೆ ಧ್ವನಿಗೂಡಿಸಿದರು.
ಅಧ್ಯಕ್ಷರು ಮತ್ತು ನೋಡಲ್ ಅಧಿಕಾರಿಗಳು ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸಭೆ ಮುಂದೂಡಿ, ಆ. 13 ರಂದು ಗ್ರಾಮಸಭೆ ನಡೆಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಕಟಿಸಿದರು.
ಗ್ರಾಪಂ ಅಧ್ಯಕ್ಷೆ ರಮಾಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಉಮಾದೇವಿ, ನೋಡಲ್ ಅಧಿಕಾರಿ ಎಂ.ಜಿ. ರೋಹಿತ್ ಇದ್ದರು.
Advertisement