ಕಾಂಗ್ರೆಸ್ ಪಕ್ಷಕ್ಕೆ ನಗರಸಭೆ 11 ಸದಸ್ಯರ ರಾಜಿನಾಮೆ

Updated on

ಚಿಕ್ಕಮಗಳೂರು: ಆಡಳಿತ ಪಕ್ಷದ ಸಚಿವರ ವಿರುದ್ಧ ಪ್ರತಿಪಕ್ಷದವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಟೀಕಿಸುವುದು ಕೇಳಿದ್ದೇವೆ. ಆದರೆ, ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವರ್ತನೆಯಿಂದ ಬೇಸತ್ತು ನಗರಸಭೆಯ 11 ಕಾಂಗ್ರೆಸ್ ಸದಸ್ಯರು ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಅಪರೂಪದ ಪ್ರಸಂಗ ಬುಧವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ, ಅವರ ವರ್ತನೆಯಿಂದಾಗಿ ತಮಗೆ ಬೇಸರವಾಗಿದೆ. ಆದುದರಿಂದ ತಾವು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದು, ಈ ರಾಜಿನಾಮೆ ಅಂಗೀಕರಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯೆಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ನನ್ನ ಅಧಿಕಾರ ಇತಿಮಿತಿ ಏನೆಂದು ಗೊತ್ತಿದೆ:  ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್  ಬುಧವಾರ ಬೆಳಗ್ಗೆ ಇಲ್ಲಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರಸಭೆಯ 11 ಕಾಂಗ್ರೆಸ್ ಸದಸ್ಯರು ಅವರನ್ನು ಭೇಟಿ ಮಾಡಿ, ನಗರದ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಜನರಿಗೆ ಸಮರ್ಪಕವಾಗಿ ನೀರು ಕೊಡುವ ಸಲುವಾಗಿ ಹೊಸದಾಗಿ ಬೋರ್‌ವೆಲ್ ಕೊರೆಸಬೇಕೆಂದು ಹೇಳುತ್ತಿದ್ದಂತೆ, ಸಚಿವರು ಮಳೆಯಾಗುತ್ತಿದೆ, ಈ ಸಂದರ್ಭದಲ್ಲಿ ಬೋರ್‌ವೆಲ್ ಕೊರೆಸುವುದು ಸರಿಯಲ್ಲ. ನನ್ನ ಅಧಿಕಾರದ ಇತಿಮಿತಿ ಏನೆಂದು ಗೊತ್ತಿದೆ. ನೀವು ಹೇಳಿದಂತೆ ಕೇಳಬೇಕಾಗಿಲ್ಲ. ನನ್ನದು ಮೂಡಬಿದರೆ ಕ್ಷೇತ್ರ. ಅಲ್ಲಿಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇದು, ನನ್ನ ಕ್ಷೇತ್ರ ಅಲ್ಲ ಎಂದು ಹೇಳಿರುವುದು ಕಾಂಗ್ರೆಸ್ ನಗರಸಭಾ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಮನವೊಲಿಕೆ ಯತ್ನ ವಿಫಲ:  ನೀವು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು, ನಮ್ಮ ಸಮಸ್ಯೆ ನಿಮ್ಮ ಬಳಿ ಹೇಳಿಕೊಳ್ಳಬೇಕು. ಇದಕ್ಕೆ ನೀವು ಸ್ಪಂದಿಸಬೇಕು.
ನಿಮ್ಮ ಮಾತಿನಿಂದ ನಮಗೆ ಬೇಸರವಾಗಿದೆ. ನೀವು ಅಸಮರ್ಥರೆಂದು ನಾವು ಪರಿಗಣಿಸಬೇಕಾಗಿದೆ. ನಿಮ್ಮ ಅವಶ್ಯಕತೆ ನಮ್ಮ ಜಿಲ್ಲೆಗೆ ಇಲ್ಲ ಎಂದು ಸ್ಥಳದಲ್ಲೇ ಸಚಿವರನ್ನು ಉದ್ದೇಶಿಸಿ ಹೇಳಿದರು. ಆಗ ಸಚಿವರ ಹಾಗೂ ಕಾಂಗ್ರೆಸ್ ನಗರಸಭಾ ಸದಸ್ಯರ  ನಡುವೆ ವಾಗ್ವಾದ ನಡೆಯಿತು. ಇದರಿಂದ ಬೇಸತ್ತ ನಗರಸಭಾ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ ಪಕ್ಷದ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಕೆಡಿಪಿ ಸಭೆಯ ನಂತರದಲ್ಲಿ ನಗರಸಭೆಯ ಕಾಂಗ್ರೆಸ್ ಸದಸ್ಯರನ್ನು ಮನವೊಲಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಸಂಜೆ ವೇಳೆಗೆ ಸಭೆ ಕರೆಯಲು ಯತ್ನಿಸಿದರು. ಆದರೆ, ಯಾವ ಸದಸ್ಯರು ಕೂಡ ಮುಂದೆ ಬರಲಿಲ್ಲ. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಸಹ ಸದಸ್ಯರ ಮನಮೊಲಿಸುವ ಪ್ರಯತ್ನ ಮಾಡಿದರೂ  ಸದಸ್ಯರು ಸ್ಪಂದಿಸಲಿಲ್ಲ.
ಅಸಮಾಧಾನ ಸ್ಪೋಟ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ನಿಗಮ, ಮಂಡಳಿಗಳಿಗೆ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹೊಸತರಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸಚಿವರು ಭಾಗವಹಿಸುತ್ತಿದ್ದ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಂದ  ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆಯೂ ಪಕ್ಷದ ಮುಖಂಡರು ಅಸಮಾಧಾನಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com