ಚಿಕ್ಕಮಗಳೂರು: ಕೆರೆಗಳ ಪುನಶ್ಚೇತನ ಯೋಜನೆಯಡಿಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ ಹಾಗೂ ಹಣ ದುರುಪಯೋಗವಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರನ್ನು ಆಗ್ರಹಿಸಿದೆ.
ಈ ಸಂಬಂಧ ಸಚಿವರಿಗೆ ಜಿಲ್ಲಾ ಪಂಚಾಯಿತಿ ಬಳಿ ಬುಧವಾರ ರೈತ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಕೆರೆಗಳ ಪುನಶ್ಚೇತನ ಯೋಜನೆ ಜಾರಿಗೆ ತಂದ ಸಂದರ್ಭದಲ್ಲಿ ಸರಕಾರ ಹೊರಡಿಸಿದ್ದ ಮಾರ್ಗಸೂಚಿಯನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಯಲ್ಲಿ ಹಲವು ಅಕ್ರಮ ನಡೆದಿದ್ದರೂ ಈ ಬಗ್ಗೆ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಗುತ್ತಿಗೆದಾರರು ಕಾಮಗಾರಿ ನಿರ್ವಹಿಸದೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಅತಿಕ್ರಮಣ: ನಗರದ ಎಪಿಎಂಸಿಯಲ್ಲಿನ ರೈತರ ಕಟ್ಟೆಯನ್ನು ವರ್ತಕರು ಅತಿಕ್ರಮಿಸಿದ್ದಾರೆ. ಈ ಕಟ್ಟೆಯನ್ನು ರೈತರಿಗೆ ಬಿಡಿಸಿಕೊಡುವಂತೆ ಎಪಿಎಂಸಿಗೆ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಇದರ ಜತೆಗೆ ಅಲ್ಲಿನ ಅವ್ಯವಸ್ಥೆ ಸರಿಪಡಿಸಿ, ರೈತರಿಗೆ ಮೂಲ ಸವಲತ್ತುಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಕೆ.ಕೆ. ಕೃಷ್ಣೇಗೌಡ, ಚಂದ್ರೇಗೌಡ, ಎಂ.ಸಿ. ಬಸವರಾಜು, ಟಿ.ಎ. ಮಂಜುನಾಥ್, ಚಂದ್ರಶೇಖರ್ ಹಾಗೂ ರೈತರು ಇದ್ದರು.
Advertisement