ಚಿಕ್ಕಮಗಳೂರು: ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಗೆ ಗೈರು ಹಾಜರಿಯಾದ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಮುಂದುವರೆದ ಸಭೆಯಲ್ಲಿ ಮಾತನಾಡಿದ ಸಚಿವರು, ಇಂದಿನ ಸಭೆಗೆ ಗೈರು ಹಾಜರಿಯಾಗಿರುವ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಬೇಕೆಂದು ಸಚಿವರು ಹೇಳಿದರು.
ಶೇ. 75 ರಷ್ಟು ಬೆಳೆ ಹಾನಿ: ಸಭೆಯ ಆರಂಭದಲ್ಲಿ ಅತಿವೃಷ್ಟಿ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಕಳೆದ ವರ್ಷದಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಅತಿಯಾದ ಮಳೆಯಿಂದಾಗಿ ಶೇ. 75 ರಷ್ಟು ಬೆಳೆ ಹಾನಿ ಸಂಭವಿಸಿದ್ದು, ಇದರಲ್ಲಿ ಕೇವಲ ಶೇ. 25 ರೈತರಿಗೆ ಮಾತ್ರ ಪರಿಹಾರ ವಿತರಣೆಯಾಗಿದೆ.
ಈ ವರ್ಷವೂ ಅತಿಯಾದ ಮಳೆಯಿಂದ ಹೆಚ್ಚಿನ ನಷ್ಟವಾಗಿದೆ. ಕಳೆದ ವರ್ಷದಂತೆ ಈ ಬಾರಿ ಪರಿಹಾರ ವಿತರಣೆಯಲ್ಲಿ ತಪ್ಪಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಳೆ ರೋಗ ಬಂದಿರುವ ಅಡಕೆ ತೋಟಗಳಿಗೆ ಪರಿಹಾರ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ಈ ಬಾರಿಯ ಮುಂಗಾರು ಮಳೆಯಿಂದ ಆಲೂಗೆಡ್ಡೆಗೆ ಅಂಗಮಾರಿ ರೋಗ ಬಂದಿದೆ. ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕೆಂದು ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಆಲೂಗೆಡ್ಡೆ ಬೆಳೆಗಾರರಿಗೆ 5 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದರು.
ರು. 25 ಸಾವಿರ ಪರಿಹಾರ: ಸಾವಿರಾರು ರುಪಾಯಿ ಖರ್ಚು ಮಾಡಿರುವ ಬೆಳೆಗಾರರಿಗೆ ಈ ಪರಿಹಾರ ಸಾಕಾಗುವುದಿಲ್ಲ, ಪರಿಹಾರದ ಮೊತ್ತ ಹೆಚ್ಚಳ ಮಾಡಬೇಕೆಂದು ಗಾಯಿತ್ರಿ ಶಾಂತೇಗೌಡ ಹೇಳಿದಾಗ ಇದಕ್ಕೆ ಧ್ವನಿಗೂಡಿಸಿದ ಬಿ.ಬಿ. ನಿಂಗಯ್ಯ ಕನಿಷ್ಟ ರು. 25 ಸಾವಿರ ಪರಿಹಾರ ನೀಡಬೇಕು ಒತ್ತಾಯಿಸಿದರು.
ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಮರೇಬೈಲು ಗ್ರಾಮದ ರಾಮೇಗೌಡ ಮೃತಪಟ್ಟು 15 ದಿನಗಳು ಕಳೆದರೂ ಅವರ ಕುಟುಂಬಕ್ಕೆ ಈವರೆಗೆ ಪರಿಹಾರ ನೀಡಿಲ್ಲ. ಪರಿಹಾರದ ಬಗ್ಗೆ ಕೇಳಿದರೆ ಅಧಿಕಾರಿಗಳು ಶವ ಪರೀಕ್ಷೆಯ ವರದಿ ಬರಬೇಕೆಂದು ಹೇಳಿದ್ದಾರೆ. ಈ ವರದಿ ಬರಲು 15 ದಿನಗಳು ಬೇಕಾ, ಈ ಧೋರಣೆ ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.
ಜಿಲ್ಲೆಯಲ್ಲಿ 16.26 ಕೋಟಿ ನಷ್ಟ: ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿರುವ ಹಣದ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ವೈಶಾಲಿ ಅವರು, ಅತೀವೃಷ್ಟಿ ಮತ್ತು ಅನಾವೃಷ್ಟಿ ಪರಿಹಾರ ನಿಧಿಯಲ್ಲಿ ರು. 9 ಕೋಟಿ ರುಪಾಯಿ ಇದೆ. ಇದರ ಜತೆಗೆ ಇತ್ತೀಚೆಗೆ ಮಳೆಯಿಂದ ಜಿಲ್ಲೆಯಲ್ಲಿ 16.26 ಕೋಟಿ ನಷ್ಟವಾಗಿದ್ದು, ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಮಳೆಯಿಂದಾಗಿ ತಮ್ಮ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿದ್ದು, ತರೀಕೆರೆ ಕ್ಷೇತ್ರಕ್ಕೆ ಒಂದು ಕೋಟಿ ರುಪಾಯಿ ಅನುದಾನ ನೀಡಬೇಕೆಂದು ತರೀಕೆರೆ ಶಾಸಕ ಶ್ರೀನಿವಾಸ್ ಆಗ್ರಹಿಸಿದರು. ತಮ್ಮ ಮೂಡಿಗೆರೆ ಕ್ಷೇತ್ರದಲ್ಲಿ ಹೆಚ್ಚು ಹಾನಿಯಾಗಿದ್ದು ಕನಿಷ್ಠ ರು. 2 ಕೋಟಿ ನೀಡಬೇಕೆಂದು ಬಿ.ಬಿ. ನಿಂಗಯ್ಯ ಆಗ್ರಹಿಸಿದರು.
ಟಿ.ಸಿ.ಗಳ ಕೊರತೆ: ಮಳೆಯಿಂದಾಗಿ ಮಲೆನಾಡಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ತಮ್ಮ ಕ್ಷೇತ್ರದಲ್ಲಿ ಮಂಜೂರಾತಿ ಆಗಿರುವಷ್ಟು ಲೈನ್ ಮ್ಯಾನ್‌ಗಳಿಲ್ಲ. ಆದುದರಿಂದ ಲೈನ್ ಮ್ಯಾನ್‌ಗಳನ್ನು ನೇಮಕ ಮಾಡಬೇಕೆಂದು ನಿಂಗಯ್ಯ ಆಗ್ರಹಿಸಿದರು. ಆಲ್ದೂರು ವಲಯದಲ್ಲಿ 30 ಲೈನ್ ಮ್ಯಾನ್‌ಗಳ ಅವಶ್ಯಕತೆ ಇದೆ. ಆದರೆ, ಇಲ್ಲಿ 4 ಮಂದಿ ಮಾತ್ರ ಇದ್ದಾರೆ ಎಂದು ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಹೇಳಿದರು.
ತೆರವುಗೊಳಿಸಿದರೆ ಎಚ್ಚರಿಕೆ: ಅರಣ್ಯ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ಮೋಟಮ್ಮ ಅವರು, ಒತ್ತುವರಿಯನ್ನು ತೆರವುಗೊಳಿಸಬಾರದು. ಒತ್ತುವರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅರಣ್ಯ ಸಚಿವರು ಹೇಳಿದ್ದಾರೆ. ಹೀಗಿದ್ದರೂ ಒತ್ತುವರಿ ತೆರವುಗೊಳಿಸಿದರೆ, ನಿಮ್ಮನ್ನೂ ತೆರವುಗೊಳಿಸಬೇಕಾದಿತೂ ಎಂದು ಮೋಟಮ್ಮ ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಜಿಪಂ ಅಧ್ಯಕ್ಷೆ ಭಾಗ್ಯ ರಂಗನಾಥ್, ಉಪಾಧ್ಯಕ್ಷೆ ಶಶಿರೇಖಾ ಸುರೇಶ್, ಜಿಪಂ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.
Advertisement