ನಗರೋತ್ಥಾನ ಯೋಜನೆ: ಮೂರನೇ ಏಜೆನ್ಸಿಯಿಂದ ಪರಿಶೀಲನೆಗೆ ಸೂಚನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ 3ನೇ ಏಜೆನ್ಸಿಯನ್ನು ನೇಮಕ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಕಳೆದ ಕೆಡಿಪಿ ಸಭೆಯಲ್ಲಿ ನಗರೋತ್ಥಾನ ಕಾಮಗಾರಿ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ಅನುಪಾಲನಾ ವರದಿಯಲ್ಲಿ ನೀಡಿರುವ ಉತ್ತರದ ಬಗ್ಗೆ ಅಸಮಾಧಾನಗೊಂಡ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಕೇಳಿರುವ ಮಾಹಿತಿ ಸಮರ್ಪಕವಾಗಿ ನೀಡಿಲ್ಲ.
ಕಳಪೆ ಕಾಮಗಾರಿ: ಚಿಕ್ಕಮಗಳೂರು ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಕಳಪೆಯಾಗಿದೆ ಎಂದು ಕಳೆದ ಸಭೆಯಲ್ಲಿ ತಾವೇ ಗಮನಕ್ಕೆ ತಂದಿದ್ದು, ಅಧಿಕಾರಿಗಳು ನೀಡಿರುವ ಉತ್ತರ ನೋಡಿದರೆ, ನಾವೇ ತಪ್ಪು ಮಾಹಿತಿ ನೀಡಿದಂತಿದೆ. ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಯಾರೆಂದು ಪ್ರಶ್ನೆ ಮಾಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ವಾರ್ಡ್‌ನಲ್ಲೂ ಕಳಪೆ ಕಾಮಗಾರಿಯಾಗಿದೆ. ನಗರದ ಹಲವೆಡೆ ಇದೇ ಪರಿಸ್ಥಿತಿ ಇದೆ ಎಂದು ಗಾಯಿತ್ರಿ ಶಾಂತೇಗೌಡ ಹೇಳುತ್ತಿದ್ದಂತೆ, ಕಾಮಗಾರಿಯ ಸ್ಥಳ ಪರಿಶೀಲನೆಗೆ ತಂಡವನ್ನು ರಚನೆ ಮಾಡಬೇಕೆಂದು ತರೀಕೆರೆ ಶಾಸಕ ಶ್ರೀನಿವಾಸ್ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು, 3ನೇ ಏಜೆನ್ಸಿಯಿಂದ ಕಾಮಗಾರಿ ಪರಿಶೀಲನೆ ನಡೆಸಿ 20 ದಿನಗಳೊಳಗಾಗಿ ತಮಗೆ ವರದಿ ನೀಡಬೇಕೆಂದು ಸೂಚನೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ