ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿಲ್ಲ. ಮಳೆಗೆ ಜಿಲ್ಲೆಯಲ್ಲಿ ಬುಧವಾರ ಮತ್ತೊಬ್ಬ ಬಲಿಯಾಗಿದ್ದಾನೆ.
ಕೊಪ್ಪ ತಾಲೂಕಿನ ಹಂಚಿಹಕ್ಲು ಗ್ರಾಮ ನಿವಾಸಿ ರಾಜೇಶ್ (29) ಮೃತ ವ್ಯಕ್ತಿ. ಜಿಲ್ಲೆಯಲ್ಲಿ ಮಳೆಯಿಂದಾಗಿ ಈವರೆಗೆ 7 ಮಂದಿ ಮೃತಪಟ್ಟಿದ್ದಾರೆ. ರಾಜೇಶ್ ಬುಧವಾರ ಬೆಳಗ್ಗೆ ತಮ್ಮ ಗದ್ದೆಗೆ ಹೋಗಿದ್ದ ಸಂದರ್ಭದಲ್ಲಿ ಹಳ್ಳದ ನೀರಿಗೆ ಗದ್ದೆ ಜಲಾವೃತವಾಗಿತ್ತು. ಇದನ್ನು ತಿಳಿಯದೆ ಮುಂದೆ ಸಾಗಲು ಯತ್ನಿಸಿದಾಗ ಹಳ್ಳದಲ್ಲಿ ಬಿದ್ದಿದ್ದು, ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಮಳೆ ಮುಂದುವರೆದಿದ್ದು, ಬುಧವಾರ ಬೆಳಗ್ಗೆ ಮಳೆ ಧಾರಾಕಾರವಾಗಿ ಸುರಿಯಿತು. ನಂತರದಲ್ಲಿ ಬಿಡುವು ನೀಡಿತಾದರೂ ಆಗ ಮಳೆ ಬರುತ್ತಲೇ ಇತ್ತು. ಮಳೆಯಿಂದಾಗಿ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಬುಧವಾರ ರಜೆ ನೀಡಲಾಗಿತ್ತು.
ಕೊಳೆ ರೋಗ ಭೀತಿ
ಬಾಳೆಹೊನ್ನೂರು ಹೋಬಳಿಯಾದ್ಯಂತ ಮಂಗಳವಾರದಿಂದ ಆಶ್ಲೇಷ ಮಳೆ ಅಬ್ಬರ ಮತ್ತೆ ಬಿರುಸುಗೊಂಡಿದ್ದು, ಬುಧವಾರ ಬೆಳಗಿನ ವೇಳೆಗೆ ಧಾರಾಕಾರ ಮಳೆಯಾಗಿದೆ.
ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ ಎಡೆಬಿಡದೆ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳಿಗೆ ಅಡ್ಡಿಯುಂಟಾದರೂ ಸಹ ಕೃಷಿಕರು ಅದನ್ನು ಲೆಕ್ಕಿಸದೇ ಕೃಷಿ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ.
ಮಳೆ ಪ್ರಮಾಣ ಹೆಚ್ಚಾದಂತೆ ಭದ್ರಾ ನದಿ ನೀರಿನ ಮಟ್ಟವೂ ಏರಿಕೆಯಾಗಿದೆ. ವ್ಯಾಪಕ ಮಳೆ ಕಾರಣ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಮಾಡಲಾಗಿತ್ತು.
ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಈ ಭಾಗದ ಪ್ರಮುಖ ಬೆಳೆಯಾದ ಅಡಕೆ, ಕಾಫಿ, ಏಲಕ್ಕಿ, ಕಾಳುಮೆಣಸಿಗೆ ಕೊಳೆ ರೋಗ ಆವರಿಸುವ ಭೀತಿ ರೈತರಿಗೆ ಎದುರಾಗಿದೆ. ಕಳೆದ ಬಾರಿಯೂ ಇದೇ ರೀತಿ ಮಳೆ ಹೆಚ್ಚಾದ ಪರಿಣಾಮ ಕೊಳೆ ರೋಗ ಬಂದು ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಮಳೆ ಜಾಸ್ತಿಯಾದಂತೆ ಬತ್ತಕ್ಕೆ ಸೊರಗು ರೋಗವೂ ಹರಡಲಿದೆ.
ಹಾನಿ ಪರಿಶೀಲನೆ
ಕೊಪ್ಪ ತಾಲೂಕು ಮೇಗುಂದಾ ಹೋಬಳಿ ವ್ಯಾಪ್ತಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಹಸೀಲ್ದಾರ್ ಮಹೇಶ್ಚಂದ್ರ ಅವರು ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು.
ಜಯಪುರ- ಕಳಸ ರಸ್ತೆ ಚನ್ನೇಕಲ್ಲು ಎಂಬಲ್ಲಿ ಭೂ-ಕುಸಿತವಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ನಂತರದಲ್ಲಿ ಬಸರೀಕಟ್ಟೆಯ ವಿದ್ಯಾನಿಕೇತನ ಹಾಸ್ಟೆಲ್ ಬಳಿ, ಸದ್ಗುರು ಪ್ರೌಢಶಾಲೆ ಮೈದಾನದಲ್ಲಿ ಭೂ ಕುಸಿತವಾಗಿದ್ದ ಜಾಗಕ್ಕೆ ಭೇಟಿ ನೀಡಿದರು.
ಬಸರೀಕಟ್ಟೆ-ಬರ್ಕನಕಟ್ಟೆ ರಸ್ತೆಯಲ್ಲಿ ಭೂ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾನಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ತಹಸೀಲ್ದಾರ್ ಅವರೊಂದಿಗೆ ಕೊಪ್ಪ ಪಿಡಬ್ಲ್ಯೂಡಿ ಎಂಜಿನಿಯರ್ ಶಿವಣ್ಣ, ತಾಪಂ ಸದಸ್ಯ ಬಿ.ಆರ್. ನಾರಾಯಣ್, ಮೇಗುಂದಾ ಹೋಬಳಿ ಕಾಂಗ್ರೆಸ್ ಮುಖಂಡ ಡಿ.ಎಸ್. ಸತೀಶ್ ಹಾಗೂ ಸ್ಥಳೀಯರಾದ ಗೋಪಾಲ್, ವಿಜಯ್ ಇದ್ದರು.
ಮನೆ ಕುಸಿತ
ಮೂಡಿಗೆರೆ ತಾಲೂಕಿನಾದ್ಯಂತ ಮಳೆ ಬಿಡದೆ ಸುರಿಯುತ್ತಿದ್ದು, ನಿಡುವಾಳೇಯ ಮರಿಯಮ್ಮ ಎಂಬವರ ಮನೆ ಕುಸಿದಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ.
ಕಳೆದ 1 ತಿಂಗಳಿನಿಂದ ಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ 34 ಮನೆಗಳಿಗೆ ಹಾನಿಯಾಗಿವೆ. ಅವುಗಳಲ್ಲಿ 26 ಮನೆಗಳು ಭಾಗಶಃ, 8 ಮನೆಗಳು ಸಂಪೂರ್ಣ ಕುಸಿದಿವೆ, ಪರಿಹಾರ ನೀಡಲಾಗಿದೆ ಮತ್ತು ಮೂವರು ರೈತರು ಮೃತಪಟ್ಟಿದ್ದಾರೆ.
ಇಬ್ಬರು ರೈತರಿಗೆ ತಲಾ 1.50 ಲಕ್ಷ ಪರಿಹಾರ ವಿತರಿಸಲಾಗಿದೆ. ಇನ್ನೊಬ್ಬ ರೈತನ ಪರಿಹಾರಕ್ಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ರಾಜಸ್ವ ನಿರೀಕ್ಷಕ ಎಂ. ಗಂಗಾಧರ್ ತಿಳಿಸಿದರು. ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಪ್ರವಾಹ ಎದುರಿಸಲು ಸಿದ್ಧತೆ: ತಹಸೀಲ್ದಾರ್
ತರೀಕೆರೆ: ಭದ್ರಾ ನದಿ ಪ್ರವಾಹ ಎದುರಿಸಲು ತಾಲೂಕು ಅಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ತಹಶೀಲ್ದಾರ್ ಶಿವಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಸೋಂಪುರದ ಬಳಿ ಹರಿಯುತ್ತಿರುವ ಭದ್ರಾ ನದಿಗೆ ನೀರು ಹೆಚ್ಚಾಗಿ ಬರುತ್ತಿರುವುದರಿಂದ ಮತ್ತು ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೋಂಪುರ ಬಳಿಯ ಕರಕುಚ್ಚಿ ಹಳ್ಳ ಭರ್ತಿಯಾಗಿದೆ. ಇದರಿಂದ ಕೆಸರುಗೊಪ್ಪ ಮಾರ್ಗದ ಕರಕುಚ್ಚಿ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದರು.
ಭದ್ರಾ ಜಲಾಶಯದಿಂದ ಈ ಮುಂಚೆ 10 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿತ್ತು. ಬುಧವಾರ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾದ ಹಿನ್ನಲೆಯಲ್ಲಿ ಜಲಾಶಯದಿಂದ 48 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿ ಸುರಿದು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಜಲಾಶಯದಿಂದ ಹೊರಬಿಡುವ ಸೂಚನೆ ಬಂದರೆ, ಸೋಂಪುರ ಬಳಿ ಭದ್ರಾ ನದಿ ಸಮೀಪದಲ್ಲಿರುವ ಸುಮಾರು 60 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದರು.
ಗಂಜಿ ಕೇಂದ್ರ: ಸೋಂಪುರ ಬಳಿಯ ಅಲಸೂರು ಶಾಲೆಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗುವುದು ಎಂದ ಅವರು, ಭದ್ರಾ ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣ ಬಗ್ಗೆ ಜಲಾಶಯದ ಅಧಿಕಾರಿಗಳಿಂದ ಪ್ರತಿ ಕ್ಷಣಕ್ಕೂ ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ನುಡಿದರು.
ಮುಂದುವರಿದ ಮಳೆ: ಕಳೆದ ಹದಿನೈದು ದಿನದಿಂದ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಬುಧವಾರವಿಡೀ ಸುರಿದಿದೆ. ಕೆಲ ಹೊತ್ತು ಸೋನೆ ಮಳೆ ಬಂದರೆ ಮತ್ತೆ ಕೆಲ ಹೊತ್ತು ಹದ ಮಳೆ ಸುರಿಯಿತು.
Advertisement