ನರಸಿಂಹರಾಜಪರ: ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿ ನಡೆಯುವ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದ ಮೂಲಕ ರೈತರಿಗೆ ಉತ್ತಮ ಮಾಹಿತಿ ದೊರಕುತ್ತಿದೆ ಎಂದು ಮಾಜಿ ಮಂಡಲ ಪ್ರಧಾನ ಎಸ್.ಡಿ.ವಿ.ಗೋಪಾಲರಾವ್ ತಿಳಿಸಿದರು.
ಅವರು ಬುಧವಾರ ನಾಗರಮಕ್ಕಿ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿ ನಡೆದ ರೈತ ಕ್ಷೇತ್ರ ಪಾಠ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಲವು ವರ್ಷಗಳ ಹಿಂದೆ ಕೃಷಿ ಇಲಾಖೆಯ ಗ್ರಾಮ ಸೇವಕರು ರೈತರ ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ನೀಡುತ್ತಿದ್ದರು. ನಂತರ ಆ ಪದ್ಧತಿ ಬಿಟ್ಟು ಹೋಗಿತ್ತು. ಈಗ ರೈತ ಕ್ಷೇತ್ರ ಪಾಠ ಶಾಲೆಯ ಮೂಲಕ ಹಿಂದಿನ ಪದ್ಧತಿಗೆ ಮರು ಜೀವ ಬಂದಿದ್ದು ಕೃಷಿ ಅಧಿಕಾರಿಗಳು ರೈತರ ಜಮೀನಿಗಳಿಗೆ ಬೇಟಿ ನೀಡಿದರೆ ಸಮಸ್ಯೆಗಳು ಹೆಚ್ಚು ಅರ್ಥವಾಗುತ್ತದೆ ಎಂದರು.
ಕೃಷಿ ಅಧಿಕಾರಿ ವಿ.ಎಸ್.ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಯಾದ ರಾಸಾಯನಿಕ ಬಳಕೆಯಿಂದ ಮಲೆನಾಡು ಭಾಗದ ಭೂಮಿಗಳು ಬರಡಾಗುತ್ತಿದ್ದು ಭೂಮಿಗಳಿಗೆ ಮತ್ತೆ ಚೇತನ ನೀಡುವ ಉದ್ದೇಶದಿಂದ 4 ವರ್ಷದ ಕೆಳಗೆ ಕೃಷಿ ಇಲಾಖೆ ಮೂಲಕ ಭೂ ಚೇತನ ಯೋಜನೆ ಜಾರಿಗೆ ಬಂದಿದೆ ಎಂದರು.
ಸೀತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಬೂ ಪೂಜಾರಿ ರೈತ ಕ್ಷೇತ್ರ ಪಾಠ ಶಾಲೆ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಪಿ.ರಮೇಶ್ ಮಾತನಾಡಿದರು. ರೈತ ಅನುವುಗಾರ ಜಗದೀಶ್ ಉಪಸ್ಥಿತರಿದ್ದರು. ಸುತ್ತ ಮುತ್ತಲಿನ ರೈತರ ಭಾಗವಹಿಸಿ ಮಾಹಿತಿ ಪಡೆದರು.
Advertisement