ಕಡೂರು: ಬೀರೂರು ಪಟ್ಟಣದಲ್ಲಿ ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಲಿತ ಸಮುದಾಯದ ಯಾರನ್ನೂ ಆಹ್ವಾನಿಸದೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಗೂ ಆಹ್ವಾನ ಪತ್ರ ನೀಡದೆ ದಲಿತ ಸಮಾಜಕ್ಕೆ ಅಪಮಾನ ಮಾಡಲಾಗಿದೆ ಎಂದು ದಸಂಸ ತಾಲೂಕು ಸಂಚಾಲಕ ಶೂದ್ರ ಶ್ರೀನಿವಾಸ್ ಆರೋಪಿಸಿದ್ದಾರೆ.
ಈ ಬಗ್ಗೆ ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಡೂರು ತಾಲೂಕಿನಲ್ಲಿ ಹಲವಾರು ವರ್ಷದಿಂದ ದಲಿತರ, ಬಡವರ, ನೊಂದವರ ಪರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ದಸಂಸ ತಾಲೂಕು ಸಂಘಟನೆಗೆ ಸೌಜನ್ಯಕ್ಕಾದರೂ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆ ಕೂಡಾ ನೀಡದೆ ಸಂಘಟಕರು ಅಪಮಾನ ಮಾಡಿದ್ದಾರೆ. ಕಾರ್ಯಕ್ರಮದ ಸಂಘಟಕರೆಲ್ಲರೂ ಮೇಲ್ವರ್ಗದವರಾಗಿದ್ದು ಸಮ್ಮೇಳನಕ್ಕೆ ಯಾವೊಬ್ಬ ದಲಿತ ವ್ಯಕ್ತಿಯನ್ನು ಆಹ್ವಾನಿಸದೇ ಇರುವುದನ್ನು ತಾಲೂಕು ದಸಂಸ ಖಂಡಿಸುತ್ತದೆ ಎಂದಿದ್ದಾರೆ.
ಮಹಿಳಾ ಸರ್ಕಾರಿ ಕಾಲೇಜು ಸ್ಥಳಾಂತರ
ಚಿಕ್ಕಮಗಳೂರು: ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು 2014- 15ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಬೇಲೂರು ರಸ್ತೆಯಲ್ಲಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ಪ್ರಾರಂಭಿಸಲಾಗಿತ್ತು. ಕೊಠಡಿಗಳ ಕೊರತೆ ಹಿನ್ನೆಲೆ ಕಾಲೇಜನ್ನು ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರ ಆವರಣ (ಡಯಟ್) ರಾಮನಹಳ್ಳಿ ಇಲ್ಲಿಗೆ ಸ್ಥಳಾಂತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲರಾದ ಟಿ.ಸಿ. ಬಸವರಾಜ (ಮೊ.9449665569) ಅವರನ್ನು ಸಂಪರ್ಕಿಸಿ.