ಕೊಪ್ಪ: ಅಲಗೇಶ್ವರ ಕಾಫಿ ತೋಟದಿಂದ ಪೂರ್ವಾನುಮತಿ ಇಲ್ಲದೇ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿರುವ ಹಿನ್ನೆಲೆ ಸರ್ಕಾರದ ಅನುದಾನ ದುರ್ಬಳಕೆ ಮಾಡುವ ಹುನ್ನಾರ ನಡೆದಿದೆ ಎಂದು ಅಲಗೇಶ್ವರದ ಕಾರ್ಮಿಕರ ಮುಖಂಡ ಹೆನ್ರಿ ರೋಡ್ರಿಗ್ರಾಸ್ ದೂರಿದ್ದಾರೆ.
ಅಲಗೇಶ್ವರ ಕಾಫಿ ತೋಟದ ಮಾಲೀಕರ ಸ್ವಾಧೀನದ ಸ.ನಂ. 8ರ ಮಧ್ಯಭಾಗದಲ್ಲಿ ಮಾಲೀಕರ ಪೂರ್ವಾನುಮತಿ ಇಲ್ಲದೇ ಅಕ್ರಮ ಪ್ರವೇಶ ಮಾಡಿ, 600 ಅಡಿ ಉದ್ದ, 3 ಅಡಿ ಅಳದ ಚರಂಡಿ ಕೊರೆದಿರುವುದಲ್ಲದೇ, ಜಯಪುರದಿಂದ ಅಲಗೇಶ್ವರದ ರಸ್ತೆಯ ಒಂದು ಬದಿಯಲ್ಲಿ ಹಿಟಾಚಿ ಬಳಸಿ ಪೈಪ್ ಅಳವಡಿಸಲು ಅಳವಾದ ಚರಂಡಿ ನಿರ್ಮಿಸಿ ಕಂದಕದ ಮಣ್ಣನ್ನೆಲ್ಲ ರಸ್ತೆ ಮೇಲೆ ಹಾಕಿ ರಾಶಿ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಲಾಗಿದೆ.
ಅಲಗೇಶ್ವರ ತೋಟದ ಕಾರ್ಮಿಕರ ಕುಡಿಯುವ ನೀರಿನ ಮೂಲವಾದ ದೋಬಿ ಹಳ್ಳದ ನೀರನ್ನು ಸ್ಥಳೀಯ ಗಮನಕ್ಕೆ ತಾರದೇ ಚೌಡಿಕಟ್ಟೆ ಪ್ರದೇಶಕ್ಕೆ ನೀರುವ ಹರಿಸುವ ಉದ್ದೇಶದ ಹಿಂದೆ ಸರ್ಕಾರದ ಅನುದಾನದ ದುರ್ಬಳಕೆ ಉದ್ದೇಶವಿದೆ. ಅಲ್ಪ ವೆಚ್ಚದಲ್ಲಿ ಚೌಡಿಕಟ್ಟೆ ಬಲಿಯ ಜಲ ಮೂಲ ಬಳಸಿ ಯೋಜನೆ ರೂಪಿಸುವ ಬದಲು, ದೂರದಿಂದ ಬಾರೀ ವೆಚ್ಚದ ಯೋಜನೆ ರೂಪಿಸಿರುವ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಯೋಜನೆ ಕೈಬಿಡುವಂತೆ ಅಲಗೇಶ್ವರ ಕಾಫಿ ತೋಟದ ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ಯೋಜನೆಗೆ ತೋಟದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರೂ ಜಿಪಂ ಎಂಜಿನಿಯರಿಂಗ್ ವಿಭಾಗ ಕಾಮಗಾರಿ ಕೈಗೊಂಡಿರುವ ಹಿಂದೆ ಭಾರೀ ಮಟ್ಟದ ಅವ್ಯವಹಾರ ಅಡಗಿದೆ ಎಂದು ಗ್ರಾಮಸ್ಥರಾದ ಎ.ಸುಧಾಕರ್, ಕ್ಲಾರೀ ರೋಡ್ರಿಗ್ರಾಸ್ ಆರೋಪಿಸಿದ್ದಾರೆ.
ಅಲ್ಲದೆ, ತಾಲೂಕಿನ ಜಯಪುರದ ಬಳಿಯ ಚೌಡಿಕಟ್ಟೆ ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಜನವಸತಿ ಪ್ರದೇಶದ ಬಳಿಯ ವರ್ಷ ಪೂರ್ತಿ ಸಮೃದ್ಧವಾಗಿ ನೀರಿರುವ ಜಲ ಮೂಲ ಬಳಕೆ ಮಾಡುವ ಬಗ್ಗ್ಗೆ ಯೋಚಿಸಲಿ ಎಂದಿದ್ದಾರೆ.