ಚಿಕ್ಕಮಗಳೂರು: ಅಪೌಷ್ಟಿಕತೆಯಿಂದ ತೊಂದರೆಗೊಳಗಾಗಿರುವ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ರಂಗನಾಥ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಸರಕಾರಿ ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಅಯೋಜಿಸಿದ್ದ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಮಕ್ಕಳಿಗೆ ಓಆರ್ಎಸ್ ದ್ರಾವಣ ಕುಡಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಅತಿಸಾರ ಭೇದಿ ಪ್ರಮುಖ ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಭೇದಿ ಅಧಿಕವಾಗಿ ಅಪೌಷ್ಟಿಕತೆಯಿರುವ ಮಕ್ಕಳ ಸಾವು ಸಂಭವಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಪುಷ್ಪರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿಸಾರ ಭೇದಿಗೆ ಕಾರಣವಾಗುವ ಅಂಶಗಳು ಹಾಗೂ ಅವುಗಳ ನಿಯಂತ್ರಣ ಮಾರ್ಗೋಪಾಯದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಎದೆ ಹಾಲಿನ ಮಹತ್ವ ಮತ್ತು ಪೂರಕ ಆಹಾರವನ್ನು ಈ ರೋಗದ ಸಂದರ್ಭದಲ್ಲಿ ನೀಡುವುದು ಒಳಿತು. ಇವುಗಳ ಬಗ್ಗೆ ಆಶಾ ಕಾರ್ಯಕರ್ತರು ಮನೆ- ಮನೆಗೆ ಭೇಟಿ ನೀಡಿ ಸೂಕ್ತ ಸಲಹೆ ನೀಡಬೇಕೆಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ. ಜ್ಯೋತಿ ಹೇಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಜಿಲ್ಲಾ ಸರ್ಜನ್ ಡಾ. ದೊಡ್ಡಮಲ್ಲಪ್ಪ, ಜಿಲ್ಲಾ ಯೋಜನ ನಿರ್ವಹಣಾಧಿಕಾರಿ ಡಾ. ರವೀಂದ್ರನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಭುಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಯು. ಲೋಕೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.