ನರಸಿಂಹರಾಜಪುರ: ಗ್ರಾಮೀಣ ಭಾಗದ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಅನೇಕ ಸೌಲಭ್ಯ ಒದಗಿಸಿದ್ದು, ವಿದ್ಯಾರ್ಥಿಗಳು ಅದನ್ನು
ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಮೇಶ್ ಕರೆ ನೀಡಿದರು.
ತಾಲೂಕಿನ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿದ್ಯಾರ್ಥಿ ಸಂಘ, ಇಕೋ ಕ್ಲಬ್, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಲಬ್ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟರಮಣಯ್ಯ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳು ಆಟ, ಪಾಠಗಳೊಂದಿಗೆ ಮಾನವೀಯ ಮೌಲ್ಯ ಅಳವಡಿಸಿ ಕೊಂಡು ಹುಟ್ಟಿದ ಊರಿಗೆ ಕೀರ್ತಿ ತರಬೇಕು ಎಂದರು.
ಸೀತೂರು ಗ್ರಾಮ ಪಂಚಾಯಿತಿ ಸದಸ್ಯರಾದ ದಿವಾಕರ, ಉಮೇಶ್, ಅಕ್ಷರ ದಾಸೋಹದ ಸಹಾಯ ನಿರ್ದೇಶಕ ಬಿ.ಜಿ. ಮಾಳಮ್ಮನವರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ಮೌನೇಶ್ವರಾಚಾರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ನಳಿನಿ ಚಂದ್ರಪ್ಪ, ಜಯರಾಂ, ವಿನೋದ, ಡಿ.ಎಸ್. ಶ್ರೀನಿವಾಸ್, ಶೇಖರ್, ಮುಖ್ಯ ಶಿಕ್ಷಕ ಎಂ.ಎಸ್. ಬಸವನಗೌಡ, ಸ್ಫೂರ್ತಿ, ಮನೋಜ್ ಇದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಚ್.ಎಂ. ರಮ್ಯಾ, ಎಸ್.ಜಿ. ಸಂಧ್ಯಾ ಮತ್ತು ಕೆ.ಮನೋಜ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.