ಆರ್ಯವೈಶ್ಯ ಮುಖಂಡ ಶ್ರೇಷ್ಠಿ ನಿಧನ

Updated on

ಶ್ರೀರಾಂಪುರ: ಆರ್ಯವೈಶ್ಯ ಸಮಾಜದ ಮುಖಂಡ ಹಾಗೂ ವರ್ತಕ ಡಿ. ಪ್ರಭಾಕರ ಶ್ರೇಷ್ಠಿ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರು ಹಲವಾರು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದರು. ನಿಧನರಾದ ನಂತರ ನೇತ್ರದಾನ ಮಾಡುವ ಇಂಗಿತ ವ್ಯಕ್ತಿಪಡಿಸಿದ್ದ ಹಿನ್ನೆಲೆಯಲ್ಲಿ ಕಣ್ಣನ್ನು ದಾನ ಮಾಡಲಾಯಿತು ಎಂದು ಪುತ್ರ ನಿತೇಶ್ ತಿಳಿಸಿದ್ದಾರೆ.
ಅಂತ್ಯ ಕ್ರಿಯೆಯನ್ನು ಮಂಗಳವಾರ ಶ್ರೀರಾಂಪುರದಲ್ಲಿ ನಡೆಸಲಾಯಿತು. ನಿಧನಕ್ಕೆ ವರ್ತಕ ಸಮುದಾಯ ಹಾಗೂ ಸ್ನೇಹಿತ ಬಳಗ ಕಂಬನಿ ಮಿಡಿದಿದೆ.

ಬಿಳಿಚೋಡು ರಸ್ತೆಯಲ್ಲಿ ಸರಣಿ ಕಳ್ಳತನ
ಭರಮಸಾಗರ: ಪಟ್ಟಣದಲ್ಲಿನ ಅಂಗಡಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ವರ್ತಕರು ಆತಂಕಗೊಳ್ಳುವಂತಾಗಿದೆ. ಸೋಮವಾರ ತಡರಾತ್ರಿ ಬಿಳಿಚೋಡು ರಸ್ತೆಯಲ್ಲಿನ ಅಂಗಡಿಗಳ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ. ಸರಣಿ ಕಳ್ಳತನಗಳಲ್ಲಿ 6 ಅಂಗಡಿಗಳ ರೂಲಿಂಗ್ ಶೆಟರ್‌ಗಳನ್ನು ಬಗ್ಗಿಸಿ ಕಳ್ಳತನ ಪ್ರಯತ್ನ ಮಾಡಿದ್ದಾರೆ. ಕೆಲವೆಡೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಾಗರಾಜ ಆಟೋಮೊಬೈಲ್ಸ್‌ನ ಶೆಟರ್ ಬಗ್ಗಿಸಿ ಸುಮಾರು 5 ಸಾವಿರ ದೋಚಲಾಗಿದೆ. ಬಿಳಿಚೋಡು ರಸ್ತೆಯ ಒಂದೇ ಸಾಲಿನಲ್ಲಿರುವ ಬಣ್ಣದ ಅಂಗಡಿ, ಕಿರಾಣಿ ಅಂಗಡಿ ಮತ್ತು ಬಟ್ಟೆ ಅಂಗಡಿಗಳಲ್ಲಿ ಸಾಕಷ್ಟು ಹಣ ದೋಚಲಾಗಿದೆ. ಇನ್ನೊಂದು ಕಿರಾಣಿ ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ವಿಫಲ ಯತ್ನ ನಡೆದಿದೆ. ಸ್ಥಳಕ್ಕೆ ಪೊಲೀಸ್ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿನ ರುದ್ರೇಶ್ವರ ಕಿರಾಣಿ ಅಂಗಡಿಯ ಶೆಟರ್ ಬಗ್ಗಿಸಿ ಕಳ್ಳತನ ಮಾಡಲಾಗಿತ್ತು. ಈಗ ಮತ್ತೊಮ್ಮೆ ಸರಣಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.ಕಳ್ಳತನದ ಸಂದರ್ಭದಲ್ಲಿ ಕಳ್ಳರನ್ನು ಸ್ಥಳೀಯ ಯುವಕರು ಹಿಡಿಯಲು ಹೋಗಿದ್ದು, ರಾ.ಹೆ. ಬೈಪಾಸ್‌ವರೆಗೆ ವೇಗವಾಗಿ ಹೋಗಿ ತಮ್ಮ ಬೈಕ್ ಮತ್ತು ಮೊಬೈಲ್ ಬಿಟ್ಟು ಪರಾರಿಯಾಗಿದ್ದಾರೆ. ಅವರಲ್ಲಿದ್ದ ಬೈಕ್ ಮತ್ತು ಮೊಬೈಲ್ ಸಹ ಕಳ್ಳತನ ಮಾಡಿದ್ದಾಗಿದೆ. ಅವು ಬೆಂಗಳೂರಿನ ಲಗ್ಗೆರೆಯಿಂದ ಅಪಹರಿಸಿರುವ ಸುಳಿವು ದೊರೆತಿದೆ. ಈ ಆಧಾರದ ಮೇಲೆ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಜಿಟಿ ಮಳೆ ಕಾರಣವಾಯ್ತು: ರಾತ್ರಿ ವೇಳೆ ಹೆಚ್ಚಿನ ಪೊಲೀಸ್ ಗಸ್ತು ಇಲ್ಲದಿರುವುದರಿಂದ ಮತ್ತು ಸುರಿಯುತ್ತಿದ್ದ ಜಿಟಿ ಮಳೆಯಿಂದ ಕಳ್ಳತನ ನಡೆಯಲು ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಅಲ್ಲದೆ ಶಾಶ್ವತವಾಗಿ ರಾತ್ರಿ ವೇಳೆ ಪೊಲೀಸ್ ಗಸ್ತು ಇರಬೇಕೆಂದು ಸ್ಥಳೀಯ ಮರ್ಚೆಂಟ್ಸ್ ಅಸೋಸಿಯೇಷನ್ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

ಮಾಜಿ ಸಚಿವ ಅಶ್ವತ್ಥ ರೆಡ್ಡಿ ಅಂತ್ಯ ಸಂಸ್ಕಾರ ಇಂದು
ಚಿತ್ರದುರ್ಗ: ಮಾಜಿ ಸಚಿವ ಜಿ.ಎಚ್. ಅಶ್ವತ್ಥ ರೆಡ್ಡಿಯವರ ಅಂತ್ಯ ಸಂಸ್ಕಾರವು ಆ.6ರ ಬುಧವಾರ ಮಧ್ಯಾಹ್ನ 12ಕ್ಕೆ ನಗರದ ದಾವಣಗೆರೆ ರಸ್ತೆಯಲ್ಲಿರುವ ಜಿ. ಹನುಮಂತರೆಡ್ಡಿ ಅಂಡ್ ಸನ್ಸ್ ಕಾಟನ್ ಮಿಲ್ ಆವರಣದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ತಿಳಿಸಿದರು. ನಗರದ ಅಶ್ವತ್ಥರೆಡ್ಡಿಯವರ ಸ್ವಗೃಹದಲ್ಲಿ ಮಂಗಳವಾರ ಸಂಜೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪಾರ್ಥಿವ ಶರೀರಕ್ಕೆ ಪುಷ್ಪಮಾಲೆ ಹಾಕುವ ಮೂಲಕ ಜಿಲ್ಲಾ ಸಚಿವರು ನಮನ ಸಲ್ಲಿಸಿದರು. ನಾಡಿನ, ಜಿಲ್ಲೆಯ ಹಿರಿಯ ರಾಜಕಾರಣಿಯಾದ ದಿವಂಗತ ಸಚಿವರು ಇಂಧನ ಸಚಿವರಾಗಿದ್ದ ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್, ಭಾಗ್ಯಜ್ಯೋತಿ ಯೋಜನೆ ಮತ್ತು ಬರಗಾಲದಿಂದ ತೀವ್ರ ವಿದ್ಯುತ್ ಸಮಸ್ಯೆಗೆ ಒಳಗಾಗಿದ್ದ ಜವಳಿ ಉದ್ಯಮಕ್ಕೆ ರಿಯಾಯಿತಿ ನೀಡುವ ಮೂಲಕ ಉತ್ತೇಜನ ನೀಡಿದ್ದರು ಎಂದು ಸ್ಮರಿಸಿದರು. ಇದೇ ವೇಳೆ ಸಹೋದರ ಹಾಗೂ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉಪಸ್ಥಿತರಿದ್ದರು. ಜಿಲ್ಲಾ ಸಚಿವರು ದಿವಂಗತರ ಕುಟುಂಬದವರಿಗೆ ಮತ್ತು ಬಂಧುಗಳಿಗೆ ಸಾಂತ್ವನ ಹೇಳಿದರು.

ಮದ್ಯವರ್ಜನ ಶಿಬಿರ ಇಂದಿನಿಂದ
ಹೊಳಲ್ಕೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಿತ್ರದುರ್ಗ ಆಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 719 ನೇ ಮದ್ಯವರ್ಜನ ಶಿಬಿರ ಆ. 6 ರಿಂದ 13 ರವರೆಗೆ ತಾಲೂಕಿನ ಗುಂಡೇರಿ ಗ್ರಾಮದ ಈಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. 6 ರಂದು 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಸಮಾರಂಭ ಉದ್ಘಾಟಿಸುವರು. ಡಾ.ಎನ್.ಬಿ ಸಜ್ಜನ್ ಅಧ್ಯಕ್ಷತೆ ವಹಿಸುವರು. ತಾಪಂ ಪ್ರಭಾರೆ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಎನ್.ಸಿ ನಾಗರಾಜ, ಪ್ರಕಾಶ್ ಹೆಗಡೆ, ಸುಬ್ರಹ್ಮಣ್ಯ ಪ್ರಸಾದ್, ಪಪಂ ಉಪಾಧ್ಯಕ್ಷೆ ಚಂದ್ರಕಲಾ ಪ್ರಕಾಶ್, ಪಿಎಸ್‌ಐ ರಂಗಸ್ವಾಮಿ, ರೋ.ಅಧ್ಯಕ್ಷ ಬಿ.ಎನ್.ಸುರೇಶ್, ಜಂಬಿಗೆ ಜಯ್ಯಣ್ಣ, ರುದ್ರಮ್ಮ ಭಾಗವಹಿಸುವರು. 3 ರಂದು 12 ಕ್ಕೆ ಸಮಾರೋಪ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಟಿ.ಎಸ್.ಜಯ್ಯಪ್ಪ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com