ಚಿತ್ರದುರ್ಗ: ಪರಿಸರದ ಬಗ್ಗೆ ಜನತೆ ಹೆಚ್ಚಿನ ರೀತಿಯ ಕಾಳಜಿ ವಹಿಸಬೇಕಾಗಿದೆ. ಈಗ ಎಲ್ಲೆಡೆ ಯಂತ್ರ ಮತ್ತು ವಾಹನದ ಬಳಕೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದನ್ನು ತಡೆಯುವ ಶಕ್ತಿ ಇರುವುದು ಪರಿಸರಕ್ಕೆ ಮಾತ್ರ. ಈ ಹಿನ್ನೆಲೆಯಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ರೂಪಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ವಿ.ಎಂ. ಮೂರ್ತಿ ತಿಳಿಸಿದರು.
ನಗರದ ದಾವಣಗೆರೆ ರಸ್ತೆ ಮಹಾವೀರ ಬಡಾವಣೆ ಉದ್ಯಾನವನದಲ್ಲಿ ರೋಟರಿ ಕ್ಲಬ್, ಜಿಲ್ಲಾ ಶಿವಸಿಂಪಿ ಸಮಾಜ ಹಾಗೂ ಮಹಿಳಾ ಘಟಕ ವಾಸವಿ ಯುವ ಜನ ಸಂಘದ ಆಶ್ರಯದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರಕ್ಕೆ ಎಲ್ಲರ ಕಾಣಿಕೆ ಅಗತ್ಯವಾಗಿದೆ. ಇಲ್ಲಿ ಯಾವುದೇ ಭೇದವಿಲ್ಲದೆ ಜನತೆ ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಬೆಳಸಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾ ವೀರಶೈವ ಶಿವಸಿಂಪಿ ಸಮಾಜದ ಮುಖಂಡ ಎಸ್. ವೀರೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಚಿಕ್ಕ ಮಕ್ಕಳಿಂದಲೇ ಕಾಳಜಿ ವಹಿಸಬೇಕು. ಈಗಾಗಲೇ ನೀರು, ಗಾಳಿ ವಿಷಯುಕ್ತವಾಗಿದೆ. ಅದನ್ನು ಸರಿಪಡಿಸಲು ಪರಿಸರವನ್ನು ಉಳಿಸಿ ಬೆಳೆಸಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬಸವರಾಜ್ ಮಾತನಾಡಿ, ಮಳೆಗಾಲದಲ್ಲಿ ಸಸಿಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮ ಕರ್ತವ್ಯ. ನಾವು ನಮ್ಮ ಹಿರಿಯರು ಹಾಕಿದ ಮರಗಳ ಗಾಳಿಯನ್ನು ಪಡೆಯುತ್ತಿದ್ದೇವೆ. ಅದರಂತೆ ನಾವು ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡಬೇಕು. ಅದು ಪರಿಸರದಿಂದಲೇ ಆಗಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಮಾಧುರಾವ್, ಬ್ರಹ್ಮಾನಂದಗುಪ್ತ, ಸುರೇಶ್ ರಾಜ್, ಮಹಿಳಾ ಘಟಕದ ಕವಿತಾ ಮಹೇಶ್, ರೂಪಾ ಗಣೇಶ್, ಸಂಪದ, ವೆಂಕಟೇಶ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.
Advertisement