ಹಿರಿಯೂರು: ಸಾರ್ವಜನಿಕ ದೂರಿನ ಮೇರೆಗೆ ಪಟ್ಟಣದ 16 ನೇ ವಾರ್ಡ್ ನಿವಾಸಿ ಹಬೀಬ್ ಖಾನ್ ಎಂಬುವರು ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಕಂಪೌಂಡ್ ತೆರವುಗೊಳಿಸುವಂತೆ ಪುರಸಭಾಧ್ಯಕ್ಷ ಜಬೀವುಲ್ಲಾ ಆದೇಶಿಸಿದ್ದಾರೆ.
ಪಟ್ಟಣದ ಭಾರತ್ ಸಾಮಿಲ್ ಮಾಲಿಕ ಹಬೀಬ್ ಖಾನ್ ಹೆಸರಿನ ನಿವೇಶನವು ಉತ್ತರ ದಕ್ಷಿಣವಾಗಿ 42 ಮೀಟರ್ ಮಾತ್ರ ಇದ್ದರೂ ಅದನ್ನು 54 ಮೀಟರ್‌ವರೆಗೆ ವಿಸ್ತರಿಸಿ ಕೌಂಪೌಂಡ್ ನಿರ್ಮಿಸಿದ್ದರ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಪುರಸಭಾಧ್ಯಕ್ಷರು ತಿಳಿಸಿದ್ದಾರೆ. ಈ ಕೌಂಪೌಂಡ್ ನಿರ್ಮಾಣ ಸಂದರ್ಭದಲ್ಲಿ ಪುರಸಭೆಯನ್ನು ವಂಚಿಸಿರುವುದು ತನಿಖೆಯಿಂದ ಧೃಡ ಪಟ್ಟ ಕಾರಣಕ್ಕೆ ಪುರಸಭೆಯ ಸಿಬ್ಬಂದಿ ಮತ್ತು ಉಪಾಧ್ಯಕ್ಷ ಆರ್.ರವಿಚಂದ್ರ ನಾಯ್ಕ ಸ್ಥಳಕ್ಕೆ ತೆರಳಿ ಕೌಂಪೌಂಡ್ ಗೋಡೆ ವೀಕ್ಷಿಸಿದರು. ಉಪಾಧ್ಯಕ್ಷ ಆರ್.ರವಿಚಂದ್ರ ನಾಯ್ಕ ಮಾತನಾಡಿ, ಸಾರ್ವಜನಿಕ ಆಸ್ತಿಗಳನ್ನು ದುರುಪಯೋಗ ಮಾಡಿಕೊಳ್ಳುವುದರ ವಿರುದ್ಧ ಪುರಸಭೆಯು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಈ ಸಮಸ್ಯೆಗೆ ಇಂದು ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು. ಇಂಥ ಪ್ರಕರಣಗಳು ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೇ ಕಂಡು ಬಂದರೂ ಕೂಡಲೇ ಪುರಸಭೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಸಾರ್ವಜನಿಕರನ್ನು ಮನವಿ ಮಾಡುವುದಾಗಿ ತಿಳಿಸಿದರು.
Advertisement