ಚಳ್ಳಕೆರೆ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸುತ್ತ ಗುಂಡಿಗಳನ್ನು ಮುಚ್ಚಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವ ಜವಾಬ್ದಾರಿಯನ್ನು ಪುರಸಭೆ ತೆಗೆದುಕೊಂಡಿದ್ದು, ನಗರೋತ್ಥಾನ ಯೋಜನೆಯಡಿ ಈ ಕಾಮಗಾರಿಯನ್ನು ಪೂರೈಸುವ ವಿಶ್ವಾಸವನ್ನು ಮುಖ್ಯಾಧಿಕಾರಿ ಜೆ.ಟಿ. ಹನುಮಂತರಾಜು ವ್ಯಕ್ತಪಡಿಸಿದ್ದಾರೆ.
ಪಟ್ಟಣ ಏಕೈಕ ಖಾಸಗಿ ಬಸ್ ನಿಲ್ದಾಣದ ಸುತ್ತಲೂ ಬೃಹದಾಕಾರ ಗುಂಡಿಗಳಿದ್ದು, ಪ್ರತಿನಿತ್ಯ ಇಲ್ಲಿ ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ಮಳೆ ಬಂತೆಂದರೆ ಗುಂಡಿಗಳಲ್ಲಿ ಕೆಸರಿನ ನೀರು ತುಂಬಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ಗುಂಡಿ ಮುಚ್ಚುವಂತೆ, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಕನ್ನಡಪ್ರಭ ಅನೇಕ ಬಾರಿ ಸಾರ್ವಜನಿಕರ ಆಹವಾಲುಗಳನ್ನು ಸುದ್ದಿ ಮೂಲಕ ಪುರಸಭಾ ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿತ್ತು.
ಹಲವಾರು ತಿಂಗಳುಗಳ ಪ್ರಯತ್ನದಿಂದ ಇಂದು ಸ್ಥಳವನ್ನು ಪರಿಶೀಲನೆ ನಡೆಸಿದ ಅವರು ಸಹಾಯಕ ಇಂಜಿನಿಯರ್ ಲೋಕೇಶ್, ಯೋಜನಾ ಸಮಾಲೋಚನ ಸಮಿತಿ ಅಭಿಯಂತರ ಬೈರಪ್ಪ ಹಾಗೂ ಗುತ್ತಿಗೆದಾರ ಶ್ರೀನಿವಾಸ್ ರೆಡ್ಡಿ ರಿಪೇರಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಗುಂಡಿಗಳಿಂದ ಹೆಚ್ಚಿನ ದೂಳು ಉಂಟಾಗುತ್ತಿದ್ದು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಸದರಿ ಗುಂಡಿಗಳಲ್ಲಿ ಹಂದಿಗಳು ಸಹ ಆಶ್ರಯ ಪಡೆದು ಜನರನ್ನು ಭಯಬೀತಗೊಳಿಸಿದ್ದವು. ಒಟ್ಟಿನಲ್ಲಿ ಸಾರ್ವಜನಿಕರ ಬಹು ದಿನಗಳ ಬೇಡಿಕೆಯನ್ನು ಪುರಸಭೆ ಈಡೇರಿಸುವಲ್ಲಿ ಕಾರ್ಯೋನ್ಮುಖವಾಗಿರುವುದು ಸಮಾಧಾನದ ವಿಷಯ.
Advertisement