ಭ್ರಷ್ಟರ ವಿರುದ್ಧ ಹೋರಾಟ ನಿರಂತರ

Updated on

ಚಿತ್ರದುರ್ಗ: ನಮ್ಮ ಹೋರಾಟದ ಫಲವಾಗಿ ಇಂದು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕೆಲ ರಾಜಕಾರಣಿಗಳು ಜೈಲಿನಲ್ಲಿದ್ದಾರೆ. ಭ್ರಷ್ಟರ ವಿರುದ್ಧ ಹೋರಾಟ ನಿರಂತರ ಎಂದು ಹೋರಾಟಗಾರ ಹಾಗೂ ಸಮಾಜ ಪರಿವರ್ತನಾ ಸಮುದಾಯ ಸಂಘಟನೆ ನೇತಾರ ಎಸ್.ಆರ್. ಹಿರೇಮಠ ತಿಳಿಸಿದರು.
ಸಮಾಜ ಪರಿವರ್ತನಾ ಸಮುದಾಯ ಸಂಘಟನೆ, ಜನ ಸಂಗ್ರಾಮ ಪರಿಷತ್ ಹಾಗೂ ವಿವಿಧ ಜನಪರ ಸಂಘಟನೆಗಳ ಜೊತೆಗೂಡಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭ್ರಷ್ಟರ ವಿರುದ್ಧ ಜನಾಂದೋಲನ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರಕೃತಿ ಸಂಪತ್ತಿನ ಲೂಟಿ ತಪ್ಪಿಸುವ ಸಲುವಾಗಿ ನಮ್ಮ ಹೋರಾಟವನ್ನು ಆರಂಭ ಮಾಡಲಾಯಿತು. ಮೊದಲು ಚಿಕ್ಕ ಪ್ರಮಾಣದಲ್ಲಿ ಪ್ರಾರಂಭವಾಗಿದ್ದು, ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿ ರಚನೆಯಾಗಿ ಭ್ರಷ್ಟರ ವಿರುದ್ಧ ಹೋರಾಟ ಆರಂಭಿಸಲಾಗಿದೆ ಎಂದರು.
ನಮ್ಮ ಹೋರಾಟ ಏನಿದ್ದರೂ ಸತ್ಯ, ಪ್ರಾಮಾಣಿಕತೆ, ಅಹಿಂಸೆಯ ಮೇಲೆ ನಡೆಯುತ್ತದೆ. ತಪ್ಪು ಮಾಡಿದವರು ಯಾರೇ ಆದರೂ, ಅವರು ಎಷ್ಟೇ ದೂಡ್ಡವರಾದರೂ ಅವರ ಮೇಲೆ ಪ್ರಕರಣ ದಾಖಲಿಸಿ ಮಾಡಿದ ತಪ್ಪಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಈ ಹೋರಾಟದ ಫಲವಾಗಿ ನ್ಯಾಯಾಲಯ ಒಂದು ವರ್ಷ ಗಣಿಗಾರಿಕೆ ನಿಷೇಧ ಮಾಡಿ ಪ್ರಕೃತಿ ಸಂಪತ್ತನ್ನು ಉಳಿಸಿತು. ತದನಂತರ ಕಾನೂನು ಕ್ರಮವಾಗಿ ಯಾವ ಕಂಪನಿಗಳು ಪರವಾನಿಗೆ ಪಡೆದಿವೆಯೋ ಅವುಗಳಿಗೆ ಮಾತ್ರ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದರ ಫಲವಾಗಿ ಉನ್ನತ ಮಟ್ಟದ ನಾಲ್ಕು ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳು ಇನ್ನು ಹೊರಗೆ ಬರಲು ಅನುಮತಿ ಸಿಗದೇ ಜೈಲಿನಲ್ಲಿದ್ದಾರೆ. ಈಗ ಅಕ್ರಮ ಗಣಿಗಾರಿಕೆ ಕಡಿಮೆಯಾಗಿ ಭೂ ಕಬಳಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ಅದರ ವಿರುದ್ಧವೂ  ಹೋರಾಟ ಮಾಡಲಾಗುತ್ತದೆ. ಕೆಲ ರಾಜಕಾರಣಿಗಳು ನೂರಾರು ಎಕರೆ ಭೂಮಿ ಕಬಳಿಸಿದ್ದಾರೆ. ಅದರ ಮಾಹಿತಿ ಇದ್ದು, ಅದರ ವಿರುದ್ಧ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರ ಭೂ ಕಬಳಿಕೆಯ ಪ್ರಮಾಣ ಹೆಚ್ಚಾಗಿದ್ದು, ಅದರ ವಿರುದ್ಧ ಸುಮಾರು 110 ಪುಟಗಳ ವಿವರವಾದ ವರದಿಯನ್ನು ರಾಜ್ಯಪಾಲರು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು, ಸೋನಿಯಾ ಗಾಂಧಿಯವರಿಗೆ ನೀಡಲಾಗಿದೆ. ಇದರ ವಿರುದ್ಧ ಹೋರಾಟವನ್ನು ಬಳ್ಳಾರಿಯಿಂದ ಆ.8 ರಿಂದ ಅರಂಭ ಮಾಡಲಾಗುವುದು ಎಂದು ಹೇಳಿದರು.
ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ದಾರಿಯುದ್ದಕ್ಕೂ ಭ್ರಷ್ಟರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಭ್ರಷ್ಟರನ್ನು ಶಿಕ್ಷಿಸಿ, ಪರಿಸರ ರಕ್ಷಿಸಿ ಎಂಬ ಘೋಷಣೆ ಮೊಳಗಿತು.
ಪ್ರತಿಭಟನೆಯಲ್ಲಿ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಜಿಲ್ಲಾ ಅಮೃತ ಮಹಲ್ ಕಾವಲು ಹೋರಾಟ ಸಮಿತಿ ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಕಾರ್ಯದರ್ಶಿ ಹನುಮಂತರಾಯ, ವಕೀಲರಾದ ಶಿವು ಯಾದವ್, ಪ್ರತಾಪ್ ಜೋಗಿ, ಬಡಗಿ ನೌಕರರ ಸಂಘದ ಜಾಕೀರ್ ಹುಸೇನ್, ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದ ಟಿಪ್ಪು ಖಾಸಿಂ ಆಲಿ, ವಂದೇ ಮಾತರಂ ಜನಜಾಗೃತಿ ವೇದಿಕೆ ಕೆ.ಟಿ. ಕುಮಾರಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು. ನಾಗರಿಕ ಹೋರಾಟ ಸಮಿತಿ, ವಂದೇ ಮಾತರಂ ಜನಜಾಗೃತಿ ವೇದಿಕೆ, ಅಸಂಘಟಿತ ಕಾರ್ಮಿಕರ ಸಂಘಟನೆ, ನೀರಿನ ಹಕ್ಕಿಗಾಗಿ ಆಂದೋಲನ - ಕರ್ನಾಟಕ ಸಂಘಟನೆಗಳು ಆಂದೋಲನಕ್ಕೆ ಬೆಂಬಲ ನೀಡಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com