ಮೊಳಕಾಲ್ಮುರು: ಕೇವಲ ಕಾಮಗಾರಿಗಳ ಮೂಲಕವೇ ಗ್ರಾಮದ ಅಭಿವೃದ್ಧಿ ಮಾಡುವುದಕ್ಕಿಂತ ಗ್ರಾಮಗಳಲ್ಲಿನ ಮಹಿಳೆಯರು, ಅಂಗವಿಲಕರು, ವೃದ್ಧರಿಗೆ ಸರ್ಕಾರದ ನೆರವು ಕಲ್ಪಿಸಿದರೆ ಅದಕ್ಕಿಂತಲೂ ಅಭಿವೃದ್ಧಿ ಬೇರೊಂದಿಲ್ಲ ಎಂದು ಜಿಪಂ ಸಿಇಒ ಮಂಜುಶ್ರೀ ತಿಳಿಸಿದ್ದಾರೆ.
ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಗ್ರಾಪಂ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಪಂ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಂಗವಿಕಲರ ವಾರ್ಷಿಕ ಕಾರ್ಯಕ್ರಮ ಹಾಗೂ ಜನ ಅಧಿಕಾರದ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಪಂಗಳ ಮೇಲೆ ಕೇವಲ ಭ್ರಷ್ಟಾಚಾರದ ದೂರುಗಳೇ ಹೆಚ್ಚಾಗಿರುವ ಪ್ರಸ್ತುತ ದಿನಗಳಲ್ಲಿ 13ನೇ ಹಣಕಾಸು ಯೋಜನೆಯ ಹಣದಲ್ಲಿ ಜನತೆಗೆ ಒಳಿತಾಗುವಂತಹ ಜನೋಪಕಾರಿ ಕಾರ್ಯಗಳನ್ನು ಕೈಗೊಳ್ಳುವುದು ಸಂತೋಷಕರ ಬೆಳವಣಿಗೆ, ಅಂಗವಿಕಲರಿಗೆ ಸಾಧನಗಳು ನೀಡುವುದು, ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸುವುದು, ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿಯೂ ಆಯೋಜಿಸವಂತಾಗಬೇಕು. ಈ ಕಾರ್ಯಕ್ರಮ ಇತರೇ ಗ್ರಾಪಂಗಳಿಗೆ ಮಾದರಿ ಆಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಲೆಕ್ಕ ಪರಿಶೋಧನಾ ಸಮನ್ವಾಯಧಿಕಾರಿ ಕಾಚಾಪುರ ರಂಗಪ್ಪ ಮಾತನಾಡಿ, ಸರ್ಕಾರದ ಅನುದಾನಗಳನ್ನು ನೇರವಾಗಿ ಜನತೆ ಬಳಿಗೆ ತಲುಪಿಸಿದರೆ ಆ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.
ಇಒ ರುದ್ರಮುನಿ ಮಾತನಾಡಿ, ಗ್ರಾಪಂ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಜನ ಮೆಚ್ಚುವಂತಹ ಕಾರ್ಯಗಳು ನೀಡಬೇಕು. 13ನೇ ಹಣಕಾಸು ಯೋಜನೆಯನ್ನು ಬರೀ ವಿವಿಧ ಕಾಮಗಾರಿಗಳಿಗೆ ಅಂಟಿಕೊಳ್ಳದೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಎಲ್ಲರ ಮನದಾಳದಲ್ಲಿ ನೆಲೆಯೂರಬಹುದು ಎಂದರು.
ಗ್ರಾಮದ 102 ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು. ಅಂಗವಿಕಲರಿಗೆ ಸಾಧನಗಳನ್ನು ವಿತರಿಸಲಾಯಿತು. ಜಿಪಂ ಸದಸ್ಯೆ ನರಸಮ್ಮ, ತಾಪಂ ಅಧ್ಯಕ್ಷೆ ಜಯಪದ್ಮ, ಸದಸ್ಯ ಅಡವಿ ಮಾರಯ್ಯ, ಗ್ರಾಪಂ ಅಧ್ಯಕ್ಷ ಶಿವಣ್ಣ, ತಾಲೂಕು ವೈದ್ಯಾಧಿಕಾರಿ ಡಾ.ತುಳಸೀ ರಂಗನಾಥ, ಡಾ.ಪದ್ಮ, ಗ್ರಾಪಂ ಉಪಾಧ್ಯಕ್ಷೆ ಮಾರಕ್ಕ, ಬಿಇಒ ಅಬ್ದುಲ್ ಬಷೀರ್, ಎಇಇ ವೆಂಕಟರಮಣ, ನಾಗರಾಜ ನಾಯಕ, ಆಂಜನೇಯ ಮೂರ್ತಿ,ಪಿಡಿಒ ರೇಣುಕಾಚಾರ್ಯ ಮೊದಲಾದವರಿದ್ದರು.
Advertisement