ಚಿತ್ರದುರ್ಗ: ನಾಡಿನ ಹಿರಿಯ ರಾಜಕಾರಣಿ, ಮಾಜಿ ಸಚಿವ ಜಿ.ಎಚ್. ಅಶ್ವಥ್‌ರೆಡ್ಡಿ ಆಗಸ್ಟ್ 3 ರಂದು ನಿಧನರಾಗಿದ್ದು,
ಅಂತ್ಯ ಸಂಸ್ಕಾರ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ನಗರದ ದಾವಣಗೆರೆ ರಸ್ತೆಯಲ್ಲಿರುವ ಜಿ. ಹನುಮಂತರೆಡ್ಡಿ ಅಂಡ್ ಸನ್ಸ್ ಹತ್ತಿ ಮಿಲ್ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಪಾರ್ಥಿವ ಶರೀರಕ್ಕೆ ಸರ್ಕಾರದ ಪರವಾಗಿ ಪುಷ್ಪ ಗುಚ್ಛ ಅರ್ಪಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಗೌರವ ವಂದನೆ ಸಲ್ಲಿಸಿದರು. ನಂತರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ವಂದನೆ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆಯೊಂದಿಗೆ ಗೌರವ ಸಲ್ಲಿಸಿದರು.
ಮೃತ ಮಾಜಿ ಸಚಿವರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಬೆಳಗ್ಗೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಪಾರ ಅಭಿಮಾನಿಗಳು ಮತ್ತು ಬಂಧು ಬಳಗದವರು ಆಗಮಿಸಿ ಅಂತಿಮ ದರ್ಶನ ಪಡೆದರು. ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಗಮಿಸಿ ದರ್ಶನ ಪಡೆದರು.
ಶಾಸಕರಾದ ಡಿ. ಸುಧಾಕರ್, ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಜಿ. ರಘು ಆಚಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಿರಿ ಎಂ. ಜಾನಕಲ್, ಉಪಾಧ್ಯಕ್ಷೆ ಅನಿತಾ ಬಸವರಾಜ್, ಆಂಧ್ರಪ್ರದೇಶದ ಸಚಿವ ಶ್ರೀರಾಮ್, ಆಂಧ್ರದ ಮಾಜಿ ಲೋಕಸಭಾ ಸದಸ್ಯ ರಾಜಗೋಪಾಲರೆಡ್ಡಿ, ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಮಂಜುಶ್ರೀ, ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ರಾಣೇಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ, ಗ್ರಾಮೀಣಾಭಿವೃದ್ಧಿ ಸಚಿವರ ಸಹೋದರ ಬಿ.ಆರ್. ಪಾಟೀಲ್, ನಗರಸಭೆ ಅಧ್ಯಕ್ಷ ಬಿ. ಕಾಂತರಾಜ್ ಮತ್ತು ನಗರಸಭೆ ಎಲ್ಲ ಸದಸ್ಯರು ಸೇರಿದಂತೆ ಅನೇಕ ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಪುಷ್ಪ ಗುಚ್ಛ ಅರ್ಪಿಸಿ ಅಂತಿಮ ದರ್ಶನ ಪಡೆದರು.
ಅಶ್ವಥ್‌ರೆಡ್ಡಿಯವರ ಹಿರಿಯ ಮಗ ಜಿ.ಎ. ಶ್ಯಾಮಪ್ರಸಾದ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಸಹೋದರ ಹಾಗೂ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ ಮೃತರ ಪತ್ನಿ, ಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
Advertisement