ಚಳ್ಳಕೆರೆ: ತಾಲೂಕಿನ ವಡೇರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಗೆ ಬುಧವಾರ ಏಕಾಏಕಿ ನುಗ್ಗಿದ ಗ್ರಾಮದ ಚಿತ್ರ ಎಂಬ ವ್ಯಕ್ತಿ ಮನಬಂದತೆ ಮಾತನಾಡುತ್ತಾ ವಿದ್ಯಾರ್ಥಿಗಳನ್ನು ಥಳಿಸಿದ್ದಲ್ಲದೆ, ತಡೆಯಲು ಹೋದ ಶಿಕ್ಷಕರ ಮೇಲೂ ಹಲ್ಲೆ ನಡೆಸಿದ್ದಾನೆ.
ಇದರಿಂದಾಗಿ ಶಾಲಾ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಶಾಲೆಯ ಕೆಲವು ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಟಿ.ಎನ್. ಕೋಟೆಯಲ್ಲಿ ನಡೆಯುತ್ತಿರುವ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ತೆರಳಿದ್ದರು. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು ಎಲ್ಲ ತರಗತಿಗಳನ್ನು ಒಂದೆಡೆ ಸೇರಿಸಿ ಶಿಕ್ಷಕರಾದ ರುದ್ರಪ್ಪ, ಆಂಜನೇಯ ಅವರು ಪಾಠ ಮಾಡುತ್ತಿದ್ದರು.
ಆಗ ಶಾಲೆಗೆ ನುಗ್ಗಿದ ಚಿತ್ರಪ್ಪ ಒಂದನೇ ತರಗತಿಯ ಬಸವರಾಜ, ಮೂರನೇ ತರಗತಿಯ ಸಿಂಚನಾ ಬಾನು, ಪ್ರಿಯಾರನ್ನು ತಳಿಸಿದ್ದಾನೆ. ಬಸವರಾಜ ಎಂಬ ಬಾಲಕನಿಗೆ ಇತ್ತೀಚೆಗೆ ತಾನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ಬಾಲಕನನ್ನೆ ಆರೋಪಿ ಮನಬಂದತೆ ತಳಿಸಿದ್ದಾನೆ.
ಈ ಹಂತದಲ್ಲಿ ಶಿಕ್ಷಕ ಅಜ್ಜಪ್ಪ ಚಿತ್ರನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್‌ಡಿಎಂಸಿ ಸದಸ್ಯರಾದ ಅರುಣ್ ನಿಂಗಪ್ಪ, ಮಹಂತೇಶ್, ಗ್ರಾಮದ ಮುಖಂಡರಾದ ಬಸವರಾಜ, ಶ್ರೀನಿವಾಸ್‌ಮೂರ್ತಿ, ನಾಗರಾಜ, ಗೋವಿಂದಪ್ಪ ಮಹಂತೇಶ್ ಅವರು ಚಿತ್ರನ ಹಲ್ಲೆಯ ಬಗ್ಗೆ ಪರಶುರಾಮಪುರ ಠಾಣೆಗೆ ದೂರು ನೀಡಿದ್ದಾರೆ. ಪರಶುರಾಮಪುರ ಪೊಲೀಸರು ಶಾಲೆಗೆ ಧಾವಿಸಿದ್ದಾರೆ. ಪೊಲೀಸರು ಆಗಮನವಾಗುತ್ತಿದ್ದಂತೆ ಚಿತ್ರ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಗೆ ಶಿಕ್ಷಕರೇ ಹೊಣೆಯಂದು ಕೆಲವು ಗ್ರಾಮಸ್ಥರು ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಂತರ ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ತೀರ್ಮಾನಿಸಿದ್ದಾರೆ.
Advertisement