ಚಿತ್ರದುರ್ಗ: ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಂದ್ರವಳ್ಳಿ ಎಸ್‌ಜೆಎಂ ಕಾಲೇಜಿನಲ್ಲಿ ಕುಂದು ಕೊರತೆ ನಿವಾರಣೆ ಸಮಿತಿ ರಚಿಸಲಾಯಿತು. ಕಾಲೇಜಿನ ಜಯದೇವ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿನಿಯರ ಕುಂದು ಕೊರತೆ ನಿವಾರಣಾ ಸಮಿತಿ ರಚನೆಗೆ ನಿರ್ಧರಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಎಸ್.ಜೆ.ಎಂ. ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಜೆ. ಶಶಿಧರ್ ಹಾಗೂ ಕಾರ್ಯದರ್ಶಿಗಳಾಗಿ ಎಚ್.ಸಿ. ಗಂಗಾಂಬಿಕೆ, ಹಾಗೂ ಸದಸ್ಯರಾಗಿ ಪ್ರಾಧ್ಯಾಪಕರಾದ ಕೆ.ಎಸ್. ರೋಹಿಣಿ, ವಿ.ಎಸ್. ನಳಿನಿ ಹಾಗೂ ಕೋಟೆ ಠಾಣೆ ಸಬ್ ಇನ್ಸ್‌ಪೆಕ್ಟರ್ ಎಸ್. ಕಮಲಮ್ಮ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗೌರಮ್ಮ ಹಾಗೂ ಬಸವೇಶ್ವರ ಆಸ್ಪತ್ರೆ ತಜ್ಞ ಡಾ. ಸಂತೋಷ್ ನೇಮಕವಾಗಿದ್ದಾರೆ.
ತೇರುಮಲ್ಲೇಶ್ವರಗೆ ಪೂಜೆ
ಹಿರಿಯೂರು: ವರುಣನ ಕೃಪೆಗಾಗಿ ಪ್ರಾರ್ಥಿಸಿ ದಕ್ಷಿಣಕಾಶಿ ಎಂದೇ ಹೆಸರಾಗಿರುವ ಪಟ್ಟಣದ ತೇರುಮಲ್ಲೇಶ್ವರ ಸ್ವಾಮಿ ಗೆ ಶ್ರಾವಣ ಸೋಮವಾರದ ಪ್ರಯುಕ್ತ ದೇವಸ್ಥಾನ ಸಮಿತಿಯ ವತಿಯಿಂದ ವಿಶೇಷ ಪೂಜೆ, ರುದ್ರಾಭಿಷೇಕ, ಎಲೆಪೂಜೆಗಳನ್ನು ನೆರವೇರಿಸಲಾಯಿತು. ವಿಶೇಷ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು.
ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ: ಖಾನ್
ಚಿತ್ರದುರ್ಗ: ವಿದ್ಯಾರ್ಥಿಗಳು ಸಮಯವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಂಡು, ಉನ್ನತ ವಿದ್ಯಾಭ್ಯಾಸಕ್ಕೆ ಮುಂದಾಗಬೇಕು. ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯ ಪಡೆದು ಸಾಕ್ಷರತೆ ಹೊಂದುವಂತೆ ಆರ್ಥಿಕ ಸಾಕ್ಷರತೆ ಕೇಂದ್ರದ ಸಂಪನ್ಮೂಲ ವ್ಯಕ್ತಿ ಜಿ.ಆರ್. ಖಾನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ರೋಟರಿ ಬಾಲಭವನದಲ್ಲಿ ರೋಟರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆ ಕೇಂದ್ರ, ನಬಾರ್ಡ್ ಮತ್ತು ಕೇಂದ್ರ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಾದವರು ಟಿ.ವಿ. ನೋಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ವಿದ್ಯಾಭ್ಯಾಸದಲ್ಲಿ ತೊಡಗಿ. ಇದರ ಜೊತೆಯಲ್ಲಿ ಪತ್ರಿಕೆ ಓದುವುದರಿಂದ ಮತ್ತು ದೂರದರ್ಶನದಲ್ಲಿ ವಾರ್ತೆಗಳನ್ನು ನೋಡುವುದರಿಂದ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ಸಲಹೆ ನೀಡಿದರು. ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಇಂದು ಎಲ್ಲ ರಂಗದಲ್ಲೂ ಮುಂದಾಗಿದ್ದಾರೆ ಎಂದ ಅವರು, ವಿದ್ಯಾರ್ಥಿ ದಿಸೆಯಿಂದಲೇ ಗುರಿ ಹೊಂದಿರಬೇಕು, ಇದರ ಜೊತೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ರೋಟರಿ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯೋಪಾಧ್ಯಾಯರಾದ ಉಮಾದೇವಿ, ಡಿಸಿಸಿ ಬ್ಯಾಂಕ್‌ನ ವಿಜಯ ಭಾಗವಹಿಸಿದ್ದರು.
Advertisement