
ಚಿತ್ರದುರ್ಗ: ಚಿತ್ರದುರ್ಗ ಕೋಟೆಯಲ್ಲಿ ಕಳೆದ ಮೂರು ದಿನಗಳಿಂದ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದ ಕೊನೆಯ ದಿನವಾದ ನಿನ್ನೆ ತಮ್ಮ ನೆಚ್ಚಿನ ನಟ ನಟಿಯರನ್ನು ಕಾಣಲು ಬಂದಿದ್ದ ವಿದ್ಯಾರ್ಥಿನಿಯೊರ್ವಳು ಕೋಟೆ ಮೇಲಿನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಚಿತ್ರದುರ್ಗದ ಮದೇಹಳ್ಳಿ ಗ್ರಾಮದ ನಿವಾಸಿಯಾಗಿರುವ ವಿಶಾಲಾಕ್ಷಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ನಿನ್ನೆ ಪರೀಕ್ಷೆ ಬರೆದ ನಂತರ ವಿಶಾಲಾಕ್ಷಿ ನಟ ಯಶ್ ಹಾಗೂ ರಾಧಿಕ ಪಂಡಿತ್‌ರನ್ನು ನೋಡಲು ಬಂದಿದ್ದಳು. ಆದರೆ ಕೋಟೆಯ ತುಪ್ಪದ ಕೊಳವನ್ನು ಹತ್ತುವಾಗ ಆಕಸ್ಮಿಕವಾಗಿ ಕಾಲು ಚಾರಿ 12 ಅಡಿ ಆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ.
ಚಿತ್ರೀಕರಣದಲ್ಲಿ ತೊಡಗಿದ್ದ ಯಶ್ ಮತ್ತು ರಾಧಿಕಾ ಈ ವಿಷಯ ತಿಳಿದ ಕೂಡಲೇ ಚಿತ್ರೀಕರಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಶಾಲಾಕ್ಷಿಯ ಆರೋಗ್ಯ ವಿಚಾರಿಸಿದರು. ಅಲ್ಲದೆ ಚಿಕಿತ್ಸೆಗೆ ತಗಲುವ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿ ಮಾನವೀಯತೆ ಮೆರೆದಿದ್ದಾರೆ.
Advertisement