ಸುಳ್ಯ: ರಾಜ್ಯ ವಿಧಾನಸಭೆ ಸಭಾಪತಿ ಕೆ.ಜಿ. ಬೋಪಯ್ಯ ನಾಪತ್ತೆಯಾಗಿದ್ದು, ಅವರನ್ನು ಕೂಡಲೇ ಹುಡುಕಿ ಕೊಡುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಸುಳ್ಯ ಪೊಲೀಸರಿಗೆ ದೂರು ಸಲ್ಲಿಸಿದೆ.
ಶುಕ್ರವಾರ ನಿಯೋಗದ ಮೂಲಕ ತೆರಳಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡರು ದೂರು ಸಲ್ಲಿಸಿದರು.
ಬೋಪಯ್ಯರು ನಮ್ಮ ನೆರೆಯ ತಾಲೂಕಿನವರಾಗಿದ್ದು, ಪ್ರಜಾಪ್ರಭುತ್ವ ನೆಲೆಯಿಂದ ಅತಿ ಶ್ರೇಷ್ಟ ವ್ಯಕ್ತಿಯಾಗಿರುವ ಅವರ ನಾಪತ್ತೆಯಿಂದ ನಮಗೆ ಆತಂಕವಾಗಿದೆ. ಸುಳ್ಯ ತಾಲೂಕು ಹಾಗೂ ಇಡೀ ರಾಜ್ಯದ ಜನತೆಯಲ್ಲಿ ಅವರ ಕಣ್ಮರೆಯ ಬಗ್ಗೆ ಮೂಡಿದ್ದ ಆತಂಕವನ್ನು ನಿವಾರಿಸಿಕೊಡಬೇಕು. ಅವರಿಗೇನಾದರೂ ತೊಂದರೆಯಾದಲ್ಲಿ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಬಂಗಾರಕೋಡಿ, ಲಕ್ಮಣ ಶೆಣೈ, ಮೂಸಕುಂಞ ಪೈಂಬೆಚ್ಚಾಲ್, ರವಿ ಕೊಡಿಯಾಲಬೈಲು, ಹರಿಪ್ರಸಾದ್ ಕೆ.ಕೆ., ಸುರೇಶ್ ಅಮೈ, ಸತ್ಯಪ್ರಸಾದ್ ಆಡಿಂಜ, ಹಸೈನಾರ್ ಜಯನಗರ ಇದ್ದರು.
ದೂರು ದಾಖಲಿಸುವುದಿಲ್ಲ: ಕೆ.ಜಿ. ಬೋಪಯ್ಯರವರು ಈ ಠಾಣೆಯ ವ್ಯಾಪ್ತಿಯವರಲ್ಲ. ದೂರುದಾರರು ಆರೋಪಿಸುವ ಪ್ರಕರಣ ಈ ಠಾಣೆಯ ವ್ಯಾಪ್ತಿಯಲ್ಲಿ ನಡೆದಿಲ್ಲ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದು ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.
ಹಾಗಾಗಿ ಇಲ್ಲಿ ಪ್ರಕರಣ ದಾಖಲಿಸುವಂತಿಲ್ಲ. ದೂರು ಸ್ವೀಕರಿಸುತ್ತೇವೆ ಅಷ್ಟೇ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಚ್.ವಿ. ಸುದರ್ಶನ್ ತಿಳಿಸಿದ್ದಾರೆ.