ಸುಳ್ಯ: ಯುವತಿಯೋರ್ವಳನ್ನು ವಿವಾಹಿತ ವ್ಯಕ್ತಿ ಅಪಹರಿಸಿದ್ದಾನೆ ಎಂದು ಯುವತಿಯ ತಾಯಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಯುವತಿಯನ್ನು ವಿಚಾರಣೆ ನೆರಸಿದ ಪೊಲೀಸರು ಆಕೆಯನ್ನು ಆಕೆಯ ತಂದೆಯೊಡನೆ ಕಳುಹಿಸಿದ ಘಟನೆ ನಡೆದಿದೆ.
ಅಜ್ಜಾವರ ಗ್ರಾಮದ ಕರಿಯಮೂಲೆಯ ಲಾವಣ್ಯ ಎಂಬ ಯುವತಿಯೋರ್ವಳನ್ನು ದೊಡ್ಡೇರಿ ಹಂಝ ಶಿವಪ್ಪ ನಾಯ್ಕ (46) ಎಂಬಾತ ಅಪಹರಿಸಿದ್ದಾನೆ ಎಂದು ಆಕೆಯ ತಾಯಿ ದೂರು ನೀಡಿದ್ದರು. ಆದರೆ, ಆ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಆಕೆ ತನ್ನನ್ನು ಯಾರು ಅಪಹರಿಸಿಲ್ಲ. ತಾನು ತನ್ನ ಅಕ್ಕನ ಮನೆಗೆ ಹಾಗೂ ಐವರ್ನಾಡಿನಲ್ಲಿರುವ ತನ್ನ ತಂದೆಯ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.
ಆಕೆ ಶಿವಪ್ಪ ನಾಯ್ಕರ ಜೊತೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಆಗಾಗ ಅವರ ಬೈಕಿನಲ್ಲಿ ಹೋಗುತ್ತಿದ್ದಳು.ನಾಪತ್ತೆಯಾದ ದಿನ ಶಿವಪ್ಪರ ಬೈಕಿನಲ್ಲಿ ಹೋಗಿದ್ದಳು. ಬಳಿಕ ಮನೆಗೆ ಬಂದಿರಲಿಲ್ಲ. ಆದ್ದರಿಂದ ಆಕೆಯ ತಾಯಿ ಸುಶೀಲ ಪೊಲೀಸರಿಗೆ ದೂರು ನೀಡಿದ್ದಳು.
ಯುವತಿ ತಾನು ಯಾರ ಮನೆಗೂ ಹೋಗುವುದಿಲ್ಲ. ಶಿವಪ್ಪ ನಾಯ್ಕರ ಮನೆಯಲ್ಲಿರುತ್ತೇನೆ ಎಂದು ತಿಳಿಸಿದಳು.
ಪೊಲೀಸರು ಮರುದಿನ ಆಕೆಯ ತಂದೆಯನ್ನು ಕರೆಸಿ ಆಕೆಯನ್ನು ಅವರೊಡನೆ ಕಳುಹಿಸಿದರು.