ಮಂಗಳೂರು: ಜಾಗ ಖರೀದಿ ವೇಳೆ ವಂಚಿಸುವ ರಿಯಲ್ ಎಸ್ಟೇಟ್ ದಂಧೆಕೋರರ ವಂಚನೆ ಬಯಲಾಗಿದೆ. ಪದವು ಎಂಬಲ್ಲಿ ಹಿಲ್ಡಾ ಫರ್ನಾಂಡಿಸ್ ಮತ್ತು ಮೊಮ್ಮಗಳು ಲಿಡ್ವಿನ್ ಫರ್ನಾಂಡಿಸ್ಗೆ 12 ಸೆಂಟ್ಸ್ ಜಾಗವನ್ನು ಖರೀದಿಸಲು ಬಂದ ಸಂಪತ್ರಾಜ್, ಗಣೇಶ್ ಮತ್ತು ತೇಜಸ್ವಿರಾಜ್ ಕೇವಲ 5.5 ಲಕ್ಷ ನೀಡಿ ಉಳಿದ ಹಣ ನೀಡದೆ, ಜಾಗದ ಮೂಲ ದಾಖಲೆ ನೀಡದೆ ವಂಚಿಸಿದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 22ರಂದು ಗಣೇಶ್ ಮತ್ತು ಸಂಪತ್ರಾಜ್ ಜಾಗ ಖರೀದಿಗೆ ಲಿಡ್ವಿನ್ ಫರ್ನಾಂಡಿಸ್ ಬಳಿ ಬಂದು 51 ಸಾವಿರ ಚೆಕ್ ನೀಡಿ ಜಾಗ ದಾಖಲೆಯ ಝೆರಾಕ್ಸ್ ಪ್ರತಿ ತೆಗೆದುಕೊಂಡು ಹೋಗಿದ್ದರು. ಬಳಿಕ 5 ಲಕ್ಷ ಮೌಲ್ಯದ 5 ಚೆಕ್ಗಳನ್ನು ನೀಡಿ ಜಾಗದ ಮೂಲ ದಾಖಲೆಗಳನ್ನು ವಕೀಲರಿಗೆ ತೋರಿಸಲು ಒಯ್ಯುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದರು. ಬಳಿಕ ಬಂದ ಸಂಪತ್ರಾಜ್, 'ನಾವು ಜಾಗ ಖರೀದಿಸುವುದಿಲ್ಲ, ತೇಜಸ್ವಿರಾಜ್ ಖರೀದಿಸುತ್ತಾರೆ' ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಹಣವೂ ನೀಡುವುದಿಲ್ಲ, ದಾಖಲೆ ಕೇಳಿದರೆ ಜಾಗ್ರತೆ ಎಂದು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಲಿಡ್ವಿನ್ ಫರ್ನಾಂಡಿಸ್ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.