ಮಹಾನಗರ ಪಾಲಿಕೆ ಸಭೆಯಲ್ಲಿ ಆಯುಕ್ತ ಡಾ.ಹರೀಶ್ ಕುಮಾರ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ(ಎಸ್ಎಎಸ್)ವಿವರವನ್ನು ಸಮರ್ಪಕವಾಗಿ ನೀಡದ ಮನೆಗಳಿಗೆ ತೆರಳುವ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಗುಲ್ಜಾರ್ಬಾನು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಇದನ್ನು ಹೇಳಿದರು.
ಈವರೆಗೆ ಶೇ.60ರಷ್ಟು ಎಸ್ಎಎಸ್ ಸಂಗ್ರಹಿಸಲಾಗಿದೆ. ಕಳೆದ 5 ವರ್ಷದಲ್ಲಿ 8 ಸಾವಿರ ಮಂದಿ ಸಮರ್ಪಕವಾಗಿ ತೆರಿಗೆ ಪಾವತಿಸುತ್ತಿದ್ದು, ಈ ಹೊಸ ನಿಯಮ ಜಾರಿಗೆ ಬಂದ ಬಳಿಕ ಎಸ್ಎಎಸ್ ಸರಿಯಾಗಿ ಪಾವತಿಸದ ಒಂದು ಸಾವಿರ ಮಂದಿಯನ್ನು ಗುರ್ತಿಸಲಾಗಿದೆ. ಅವರಲ್ಲಿಗೆ ತೆರಳಿ ಎಸ್ಎಎಸ್ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ನಾಗರಿಕರಿಗೆ ಫೆ.1ರಿಂದ 15ರ ವರೆಗೆ ಎಸ್ಎಎಸ್ ಪಾವತಿಸಲು ಅವಕಾಶವಿದೆ. ಈ ಬಾರಿ ಶೇ.ನೂರು ಎಸ್ಎಎಸ್ ವಸೂಲಾತಿಗೆ ತೀರ್ಮಾನಿಸಲಾಗಿದೆ ಎಂದರು.
ಇನ್ನು 'ಟೈಗರ್' ಘರ್ಜಿಸದು: ನಗರದ ಫುಟ್ಪಾತ್ಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ನಡೆಸುತ್ತಿದ್ದ ಟೈಗರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಯುಕ್ತ ಡಾ.ಹರೀಶ್ ಕುಮಾರ್ ಸ್ಪಷ್ಟಪಡಿಸಿದರು. ಈ ಕುರಿತು ಸದಸ್ಯ ಜೇಮ್ಸ್ ಡಿಸೋಜ ಪ್ರಸ್ತಾಪಿಸಿದ್ದರು.
ಫುಟ್ಪಾತ್ನ್ನು ವ್ಯಾಪಾರಕ್ಕೆ ಅತಿಕ್ರಮಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಸರ್ಕಾರದಿಂದ ಇನ್ನಷ್ಟೆ ಸ್ಪಷ್ಟ ನಿರ್ಧಾರ ಬರಬೇಕು. ಮಾನವಹಕ್ಕು ಆಯೋಗದ ಆಕ್ಷೇಪವೂ ಇರುವುದರಿಂದ ಮಾನವೀಯತೆ ನೆಲೆಯಲ್ಲಿ ಕ್ರಮಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ. ಆದ್ದರಿಂದ ಇನ್ನು ಮುಂದೆ ಟೈಗರ್ ಕಾರ್ಯಾಚರಣೆ ನಡೆಸುವುದಿಲ್ಲ. ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಫುಟ್ಪಾತ್ ವ್ಯಾಪಾರ ಕಂಡುಬಂದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬಜ್ಪೆಯಲ್ಲಿ ಸ್ಮಾರಕಕ್ಕೆ ಆಗ್ರಹ: ಬಜ್ಪೆಯಲ್ಲಿ ವಿಮಾನ ದುರಂತದಲ್ಲಿ ಮಡಿದವರ ನೆನಪಿಗೆ ಸ್ಮಾರಕ ನಿರ್ಮಿಸುವ ವಿಚಾರವನ್ನು ವಿಪಕ್ಷ ಸದಸ್ಯ ಹರಿನಾಥ್ ಪ್ರಸ್ತಾಪಿಸಿ ಮೇಯರ್ಗೆ ಮನವಿ ಸಲ್ಲಿಸಿದರು. ಆ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸದಸ್ಯ ಶಂಕರ ಭಟ್ ಹೇಳಿದರು. ಆದರೂ ಹರಿನಾಥ್ ಪಟ್ಟುಬಿಡದಾಗ ಮೇಯರ್ರವರು ಜಿಲ್ಲಾ ಪಂಚಾಯ್ತಿಗೆ ಮನವಿಯನ್ನು ಕಳುಹಿಸಿಕೊಡುವುದಾಗಿ ಹೇಳಿದರು.
ರಸ್ತೆ ಅತಿಕ್ರಮಣ ಕುರಿತು ಸತ್ಯಶೋಧನಾ ವರದಿ ಬಗ್ಗೆ ಸದಸ್ಯೆ ಮರಿಯಮ್ಮ ಥಾಮಸ್ ಮಾತನಾಡಿ, ಅತಿಕ್ರಮಣವಾದ್ದನ್ನು ತೆರವುಗೊಳಿಸಲು ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಪಾಲಿಕೆ ಹೇಳಿದಾಗ ತೆರವುಗೊಳಿಸುವುದಾಗಿ ಅತಿಕ್ರಮಿತ ವ್ಯಕ್ತಿ ಹೇಳಿದ್ದಾರಲ್ಲದೆ, ಪಾಲಿಕೆಗೆ ಬೇಕಾದ ಸಹಕಾರ ನೀಡಲು ಸಾಧ್ಯ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರೂ ಮರಿಯಮ್ಮ ಥಾಮಸ್ಗೆ ಸಮಾಧಾನವಾಗಲಿಲ್ಲ. ಉಪಮೇಯರ್ ಅಮಿತಕಲಾ ಹಾಜರಿದ್ದರು.