ವಿಟ್ಲ: ವಿಟ್ಲ ಕಸಬಾ ಗ್ರಾಮದ ಕಡಂಬು- ಅನಿಲಕಟ್ಟೆ- ಪೂರ್ಲುಪ್ಪಾಡಿ ಜಿಲ್ಲಾ ಪಂಚಾಯಿತಿ ರಸ್ತೆ ಸಂಚಾರ ಯೋಗ್ಯವಾಗಿಲ್ಲ. ಈಗಾಗಲೇ ಮಂಜೂರಾಗಿರುವ 5 ಲಕ್ಷ ಅನುದಾನದಲ್ಲಿ ಕೂಡಲೇ ರಸ್ತೆ ದುರಸ್ತಿ ಮಾಡಿಕೊಡಬೇಕೆಂದು ಇಲ್ಲಿನ ನಾಗರಿಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಟ್ಲ ಕಸಬಾ ಗ್ರಾಮದ ಸರ್ವೆ ನಂ. 535/3ಎ1ರಲ್ಲಿರುವ ಸರ್ಕಾರಿ ಜಮೀನಿನಲ್ಲಿರುವ ಸಂಪರ್ಕ ರಸ್ತೆ ನಿರ್ಮಾಣ ವಿಚಾರದಲ್ಲಿ ವಿಟ್ಲ- ಪಡ್ನೂರು ಗ್ರಾಮದ ಮೀನಾಕ್ಷಿ ಎಂಬವರು ಆಕ್ಷೇಪಣೆ ನಡೆಸಿದ್ದು, ಇದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಹೈಕೋರ್ಟ್ ಈ ಸ್ಥಳ ಸರ್ಕಾರದ್ದೆಂದು ತೀರ್ಪ ನೀಡಿದ್ದು, ಇದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗೆ ಖಾಸಗಿ ಮೇಲ್ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಯವರು ಮತ್ತೆ ತಹಸೀಲ್ದಾರರಿಗೆ ಸ್ಪಷ್ಟೀಕರಣಕ್ಕೆ ಸೂಚಿಸಿದ್ದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ತಹಸೀಲ್ದಾರರು ಇದು ಸರ್ಕಾರಿ ಸ್ಥಳವಾಗಿದ್ದು ಸಾರ್ವಜನಿಕ ಸಂಪರ್ಕ ರಸ್ತೆ ನಿರ್ಮಾಣಕ್ಕೆ ತೆರವುಗೊಳಿಸುವಂತೆ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರ್ ಇಲಾಖೆಗೆ ಸೂಚಿಸಿದೆ. ಹಾಗಾಗಿ ತಕ್ಷಣ ಸಂಬಂಧಪಟ್ಟ ವಿಟ್ಲ ಗ್ರಾಪಂ ರಸ್ತೆ ದುರಸ್ತಿಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.
Advertisement