ಇಲಿಜ್ವರಕ್ಕೆ ಮಹಿಳೆ ಬಲಿ

Updated on: 

ಮಂಗಳೂರು:  ಇಲಿಜ್ವರದಿಂದ ಎನ್‌ಎಂಪಿಟಿ ಕ್ವಾಟರ್ಸ್‌ನ ಮೀನಾಕ್ಷಿ (45) ಎನ್‌ಎಂಪಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
 ಜ್ವರ ವಿಪರೀತವಾಗಿ ಜು.29ರಂದು ಎನ್‌ಎಂಪಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತ ಪರೀಕ್ಷೆ ಮಾಡುವಾಗ ರಕ್ತ ಕಣಗಳು 60 ಸಾವಿರ ಇತ್ತು (ಆರೋಗ್ಯವಂತರಲ್ಲಿ 1.20ರಿಂದ 1.40 ಲಕ್ಷ ರಕ್ತ ಕಣಗಳು).
ಡೆಂಘಿ, ಮಲೇರಿಯಾ ಪತ್ತೆಯಾಗದಿದ್ದರೂ ಇದೇ ರೋಗಕ್ಕೆ ಮದ್ದು ನೀಡುತ್ತಿದ್ದರು. ರಕ್ತಣ ಕಣಗಳು 25 ಸಾವಿರದ ಕನಿಷ್ಠ ಮಟ್ಟಕ್ಕೆ ಇಳಿಯಿತು. ಮಹಿಳೆ ರಕ್ತ ಎ ನೆಗೆಟಿವ್, ನಾಲ್ಕು ಬಾಟಲಿ ರಕ್ತ ಬೇಕಾಗಿತ್ತು. ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇತ್ತು. ಯು.ಎಂ.ಸಿ.ಯಿಂದ ತುರ್ತು ನಾಲ್ಕು ಬಾಟಲ್ ರಕ್ತ ತಂದರು. ರಕ್ತವನ್ನು ಏಕಕಾಲದಲ್ಲಿ ದೇಹಕ್ಕೆ ನೀಡಿದರು. ಪರಿಣಾಮ ವಾಂತಿ ಮಾಡಿ ಪರಿಸ್ಥಿತಿ ವಿಷಮಿಸಿತ್ತು ಎಂದು ಪತಿ ಎನ್‌ಎಂಪಿಟಿ ಮೆರೈನ್ ವಿಭಾಗ ಉದ್ಯೋಗಿ ನಾಗೇಶ್ ಆರೋಪಿಸಿದ್ದಾರೆ.
 ಜು.31ರಂದು ರಾತ್ರಿ ತನ್ನದೇ ಕಾರ್‌ನಲ್ಲಿ ಪತ್ನಿಯನ್ನು ಕರೆದುಕೊಂಡು ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಅಸಾಹಯಕತೆ ವ್ಯಕ್ತಪಡಿಸಿದರು. 6 ಗಂಟೆ ಮುಂಚಿತವಾಗಿ ಕರೆದುಕೊಂಡು ಬಂದಿದ್ದರೆ ಬದುಕಿಸಬಹುದು ಎಂದರು. ಅ.1 ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಆಸ್ಪತ್ರೆ ವೈದ್ಯಾಧಿಕಾರಿ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ, ಆ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಕೂಡಾ ಇರಲಿಲ್ಲ ಎಂದು ಪತಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೌಕರರ ಪ್ರತಿಭಟನೆ: ಎನ್‌ಎಂಪಿಟಿ ನೌಕರರು ಶನಿವಾರ ಪ್ರತಿಭಟನೆ ನಡೆಸಿದರು. ಎನ್‌ಎಂಪಿಟಿ ಸಿಬ್ಬಂದಿ -ಎಚ್‌ಎಂಎಸ್ ಸಂಘ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಸುಧಾಕರ ಕಾಮತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಶಾಸಕ ಮೊಯ್ದಿನ್ ಬಾವ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಕಾರ್ಪೊರೇಟರ್ ರಘುವೀರ್ ಪಣಂಬೂರು, ಗಣೇಶ್ ಹೊಸಬೆಟ್ಟು, ಪುರುಷೋತ್ತಮ ಚಿತ್ರಾಪುರ ನಿಯೋಗದಲ್ಲಿ ಎನ್‌ಎಂಪಿಟಿ ಅಧ್ಯಕ್ಷರನ್ನು ಭೇಟಿ ಮಾಡಿ, ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ವಿರುದ್ಧ ದೂರುಗಳ ಪಟ್ಟಿ ಮಾಡಿದರು. ಆಸ್ಪತ್ರೆಯಲ್ಲಿ ತಜ್ಞರ ಕೊರತೆ ಇರುವುದರಿಂದ ರೋಗಿಗಳನ್ನು ಅಗತ್ಯ ಇದ್ದ ತಕ್ಷಣ ಬೇರೆ ಆಸ್ಪತ್ರೆಗಳಿಗೆ ಒಯ್ಯಬೇಕು ಎಂಬ ಮನವಿ ಮಾಡಿದರು.
 ಎನ್‌ಎಂಪಿಟಿ ಅಧ್ಯಕ್ಷ ಪಿ.ಸಿ. ಪರಿದ ವಿಚಾರಣೆ ಸಮಿತಿ ರಚಿಸುವ ಭರವಸೆ ನೀಡಿದರು. ಯಾರೇ ತಪ್ಪು ಮಾಡಿದ್ದರೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಮೃತನ ಮಗ ಯಾ ಮಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com