ಉಡುಪಿ: ಭಾನುವಾರ ಮಳೆ ಸಾಕಷ್ಟು ಹಿಮ್ಮುಖವಾಗಿದ್ದರೂ, ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ಪ್ರವಾಹ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 3 ಮಂದಿ ನೀರುಪಾಲಾದ ಪ್ರತ್ಯೇಕ ಘಟನೆಗಳು ಬೈಂದೂರು ಮತ್ತು ಮಲ್ಪೆಯಲ್ಲಿ ನಡೆದಿವೆ. ಇನ್ನೊಂದು ಪ್ರಕರಣದಲ್ಲಿ ಯುವಕ ಸಮುದ್ರ ಪಾಲಾಗಿದ್ದಾನೆ.
ಬಲೆ ಸಿಕ್ಕಿ ಮೀನುಗಾರ ಸಾವು: ಕುಂದಾಪುರ ತಾಲೂಕಿನ ಉಪ್ಪುಂದ ಗ್ರಾಮದ ಜನತಾ ಕಾಲೋನಿಯ ಮೀನುಗಾರರೊಬ್ಬರು ನದಿ ಪ್ರವಾಹದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಕುಪ್ಪಯ್ಯ ಖಾರ್ವಿ (56). ಅವರು ಭಾನುವಾರ ಬೆಳಗ್ಗೆ 10 ಗಂಟೆಗೆ ಬಿಜೂರು ಗ್ರಾಮದ ಕಟ್ಟಿನಹೊಳೆ ಎಂಬಲ್ಲಿ ಸುಮನಾವತಿ ನದಿಯಲ್ಲಿ ದೋಣಿಯಲ್ಲಿ ಕುಳಿತು ಬೀಸುಬಲೆ ಹರಡಿ ಮೀನುಗಾರಿಕೆ ನಡೆಸುತ್ತಿದ್ದರು. ಆಗ ಆಕಸ್ಮಿಕವಾಗಿ ಬೀಸಿದ್ದ ಬಲೆ ಎಳೆಯುವಾಗ ಕಾಲಿಗೆ ಸಿಕ್ಕಿಬಿದ್ದು ಕುಪ್ಪಯ್ಯ ಖಾರ್ವಿ ಅವರು ಆಯ ತಪ್ಪಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ.
ದೋಣಿ ಮಗುಚಿ ಇಬ್ಬರ ಸಾವು: ಉಡುಪಿ ತಾಲೂಕಿನ ಮಲ್ಪೆ ಸಮೀಪದ ಪಡುಕರೆ ಎಂಬಲ್ಲಿ ಬಾನುವಾರ ಬೆಳಿಗ್ಗೆ 11 ಗಂಟೆಗೆ ಮೀನುಗಾರಿಕೆ ನಡೆಸುತ್ತಿದ್ದ ತುಕರಾಮ್ ಸುವರ್ಣ (55) ಮತ್ತು ನವೀನ್ ಸಾಲ್ಯಾನ್ (34) ದೋಣಿ ಮಗುಚಿ ನೀರುಪಾಲಾಗಿದ್ದಾರೆ.
ಅವರು ಆನಂದ ಕುಂದರ್, ಉದಯ ಮರಕಾಲ, ಸಾಧು, ದಿನೇಶ್ ಸುವರ್ಣ ಎಂಬವರ ಜೊತೆಗೆ ಬೆಳಗ್ಗೆ 6 ಗಂಟೆಗೆ 2 ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಪಡುಕರೆ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಸುಮಾರು 11 ಗಂಟೆಗೆ ಜೋರಾಗಿ ಬೀಸಿದ ಬಿರುಗಾಳಿಗೆ 2 ದೋಣಿಗಳು ಮಗುಚಿ, ಎಲ್ಲಾ ಮೀನುಗಾರರು ಸಮುದ್ರಕ್ಕೆ ಬಿದ್ದರು. ಅವರಲ್ಲಿ 5 ಮಂದಿ ಈಜಿ ಮೇಲೆ ಬಂದರೇ ತುಕರಾಮ್ ಮತ್ತು ನವೀನ್ ನೀರುಪಾಲಾಗಿದ್ದಾರೆ.
Advertisement