ಮಂಗಳೂರು: ಬಹ್ರೈನ್ ಬಿಟ್ಟು ತಾಯ್ನಾಡಿಗೆ ಆಗಮಿಸುವ ಕನ್ನಡಿಗರಿಗೆ ಕರ್ನಾಟಕದಲ್ಲಿ ಪ್ರತ್ಯೇಕ ಭವನ ನಿರ್ಮಿಸಲು ಜಾಗ ಮಂಜೂರಾತಿಗೆ ಮುಖ್ಯಮಂತ್ರಿ ಜತೆ ಪ್ರಸ್ತಾಪಿಸುವುದಾಗಿ ರಾಜ್ಯ ಕ್ರೀಡಾ ಹಾಗೂ ಯುವಜನ ಸಬಲೀಕರಣ, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಭರವಸೆ ನೀಡಿದ್ದಾರೆ.
ಮಂಗಳೂರು ಪುರಭವನದಲ್ಲಿ ಭಾನುವಾರ ಗುರು ಇನ್‌ಸ್ಟಿಟ್ಯೂಟ್ ಹುಬ್ಬಳ್ಳಿ ಮತ್ತು ಗುರುಬಲ ಎಂಟರ್ಟೇನರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ 'ಬಹ್ರೈನ್ ಕನ್ನಡೋತ್ಸವ-2014' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಜ್ಯದ 30 ಜಿಲ್ಲೆಗಳಲ್ಲಿ ಕನ್ನಡದ ಹೆಸರು ಇರುವ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಮಾತ್ರ. ಇಲ್ಲಿನವರು ಹೆಚ್ಚಾಗಿ ಬಹ್ರೈನ್‌ನಲ್ಲಿ ಕನ್ನಡಿಗರು ಉದ್ಯೋಗದಲ್ಲಿದ್ದು, ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಹಾಗೆಯೇ ಕನ್ನಡಿಗರು ಬೇರೆ ಬೇರೆ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರು ಇಲ್ಲಿಗೆ ವಾಪಾಸ್ ಬಂದಾಗ ಇಲ್ಲಿನ ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗುತ್ತದೆ. ಬಹ್ರೈನ್‌ನಲ್ಲಿ ಉದ್ಯಮ ನಡೆಸಿ ವಾಪಾಸ್ ತವರಿಗೆ ಆಗಮಿಸುವವರ ಉಪಯೋಗಕ್ಕೆ ರಾಜ್ಯದಲ್ಲೂ ಬಹ್ರೈನ್ ಕನ್ನಡ ಭವನ ನಿರ್ಮಿಸುವ ಕೋರಿಕೆಯನ್ನು ಸರ್ಕಾರದ ಮುಂದಿಡುವುದಾಗಿ ಹೇಳಿದರು.
ದಿನಾರ್‌ನ ಹಿಂದೆ ಹೋಗಿಲ್ಲ: ಸಮಾರಂಭದ ಅಧ್ಯಕ್ಷತೆ ವಹಿಸಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಹಣ ಗಳಿಸುವ ಉದ್ದೇಶದಿಂದ ವಿದೇಶಕ್ಕೆ ಹೋಗುವುದಾದರೆ ಕನ್ನಡವನ್ನು ಮರೆಯಬೇಕು. ಅಂದರೆ ನಮ್ಮತನ ಮರೆತು ಅಲ್ಲಿನ ಕರೆನ್ಸಿ ದಿನಾರ್‌ನ ಹಿಂದೆ ಹೋದರೆ ಮಾತ್ರ ಹಣ ಗಳಿಸಲು ಸಾಧ್ಯ. ಇಷ್ಟೆಲ್ಲ ಕನ್ನಡಿಗರು ಸೇರಿ ವಾರದಲ್ಲಿ ಒಂದೆಡೆ ಸೇರಿ ಕಳೆದ ಐದಾರು ತಿಂಗಳ ಪರಿಶ್ರಮದಿಂದ ಕಾರ್ಯಕ್ರಮ ರೂಪಿಸಿದ್ದಾರೆ. ಇವರ್ಯಾರೂ ದಿನಾರ್‌ನ ಹಿಂದೆ ಹೋದವರಲ್ಲ. ಕನ್ನಡ ಮನಸ್ಸು, ಪ್ರೀತಿ ಸದಾ ಉಳಿಸಿಕೊಂಡವರು ಎಂದರು.
ನಮ್ಮಲ್ಲಿ ಇಬ್ಬರು ಕನ್ನಡಿಗರು ಸೇರಿದಾಗ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇವೆ. ಆದರೆ ವಿದೇಶದಲ್ಲಿ ಇಬ್ಬರು ಕನ್ನಡಿಗರು ಸಿಕ್ಕಾಗ ಕನ್ನಡದಲ್ಲೇ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲೇ ಹೀಗೇಕೆ ಎಂದು ಅನಿವಾಸಿ ಕನ್ನಡಿಗರು ಪ್ರಶ್ನಿಸುತ್ತಾರೆ. ಇಂಥ ಕಾರ್ಯಕ್ರಮ ಸಂಘಟಿಸಿದ್ದನ್ನು ಗಮನಿಸಿದಾಗ ಕನ್ನಡ ನಿಜಕ್ಕೂ ಸುರಕ್ಷಿತವಾಗಿದೆ. ಕನ್ನಡ ಕಂಪು, ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದರು. ಪ್ರತಿ ವರ್ಷ ಬಹ್ರೈನ್ ಕನ್ನಡೋತ್ಸವವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುವಂತೆ ಸಲಹೆ ಮಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಹ್ರೈನ್‌ನಲ್ಲಿ ಕನ್ನಡ ಅಲ್ಪಸಂಖ್ಯಾತ ಭಾಷೆ, ಅಲ್ಲಿರುವ ಕನ್ನಡಿಗರು ಇಲ್ಲಿ ಕನ್ನಡೋತ್ಸವ ಆಚರಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಉಳಿಸುವ ಪಾಠ ಕಲಿಸಿದ್ದಾರೆ. ಜನಿಸಿದ ಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ ಉಕ್ತಿಯನ್ನು ಅನಿವಾಸಿ ಕನ್ನಡಿಗರು ಸಾಧಿಸಿತೋರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಶತಮಾನೋತ್ಸವಕ್ಕೆ ಆಹ್ವಾನ: ಬಹ್ರೈನ್ ಇಂಡಿಯನ್ ಕ್ಲಬ್ ಅಧ್ಯಕ್ಷ ಆನಂದ ಲೋಬೋ ಮಾತನಾಡಿ, ಈ ಕ್ಲಬ್ ನೂರು ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾನು ಕನ್ನಡಿಗನೇ ಆಗಿದ್ದು, ಕನ್ನಡದ ಕಂಪನ್ನು ಬಹ್ರೈನ್‌ನಲ್ಲಿ ಪಸರಿಸುತ್ತಿದ್ದೇನೆ. ಶತಮಾನೋತ್ಸವ ಕಾರ್ಯಕ್ರಮಕ್ಕೆ ಕನ್ನಡಿಗ ಸಂಸದ, ಸಚಿವರು, ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗುವುದು. ಬಹ್ರೈನ್ ಕೆಲಸ ಬಿಟ್ಟು ವಾಪಾಸಾಗುವ ಕನ್ನಡಿಗರಿಗೆ ರಾಜ್ಯದಲ್ಲಿ ಬಹ್ರೈನ್ ಕನ್ನಡ ಭವನ ನಿರ್ಮಿಸಲು ಜಾಗ ಒದಗಿಸುವಂತೆ ಸರ್ಕಾರವನ್ನು ಕೋರುವುದಾಗಿ ಹೇಳಿದರು.
ಸಾಧಕ ಉದ್ಯಮಿಗಳಾದ ರಾಜೇಂದ್ರ ಪ್ರಭು, ಝಕಾರಿಯಾ, ಆನಂದ ಲೋಬೋ, ಶಂಕರ ಜತ್ತನ್ನ, ಮಹಮ್ಮದ್ ಮನ್ಸೂರ್‌ರನ್ನು ಸನ್ಮಾನಿಸಲಾಯಿತು. ಬಹ್ರೈನ್ ಕನ್ನಡಿಗರಾದ ಕಿರಣ್ ಉಪಾಧ್ಯಾಯ, ರಮೇಶ್ ಮಂಜೇಶ್ವರ್, ರಮೇಶ್ ರಾಮಚಂದ್ರನ್, ಅರುಣ್ ಐರೋಡಿ, ಆಸ್ಟಿನ್ ಸಂತೋಷ್ ಹಾಗೂ ಕೃಷ್ಣ ಭಟ್ ಕಾರ್ಯಕ್ರಮ ಸಂಘಟಿಸಿದ್ದರು. ಪತ್ರಕರ್ತ ಮನೋಹರ ಪ್ರಸಾದ್, ಸುಚೇತಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು.
Advertisement