ಉಡುಪಿ: ಪತ್ರಕರ್ತರು ಇಂದು ತಾವು ಸಮಾಜದ ಸೇವಕರು ಎಂಬುದನ್ನು ಮರೆತಿರುವುದರಿಂದ ಅವರು ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರ ತಪ್ಪಾಗಿ ವರ್ತಿಸುತ್ತಿದೆ. ಇದರಿಂದ ಮಾಧ್ಯಮದ ಮೇಲೆ ಆಕ್ರಮಣವಾಗುವ ಸಾಧ್ಯತೆ ಇದೆ ಎಂದು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಎಂ.ವಿ. ಕಾಮತ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಎಂಜಿಎಂ ಕಾಲೇಜಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ 2 ದಿನಗಳ ಕಾಲ ನಡೆದ ಪತ್ರಕರ್ತರ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಪ್ರಧಾನ ಭಾಷಣ ಮಾಡಿದರು.
ಪತ್ರಕರ್ತರು ತಾವು ಮಾಡುವ ವರದಿಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎಂಬ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ವೃತ್ತಿಯಲ್ಲಿ ವೈಯಕ್ತಿಕ ಕಾರಣಗಳು ನುಸುಳಬಾರದು ಎಂದು ಅವರು ಸಲಹೆ ಮಾಡಿದರು.
ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಮಾತನಾಡಿ, ನಾಡಿನಲ್ಲಿಂದು ಮೌಲ್ಯಗಳು ಕುಸಿದಿವೆ. ಎಲ್ಲರೂ ಹಣದ ಹಿಂದೆ ಬೆನ್ಹತ್ತಿದ್ದಾರೆ. ಓದುಗರು ಕೂಡ ಪತ್ರಿಕೆಗಳು ಕಡಿಮೆ ಬೆಲೆಗೆ ಸಿಗಬೇಕು ಎಂದು ಬಯಸುತ್ತಾರೆ. ಇದರಿಂದ ಪತ್ರಿಕೆಗಳು ಜಾಹೀರಾತುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಸುದ್ದಿಯ ಪಾವಿತ್ರ್ಯ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಮಾತನಾಡಿ, ಸುದ್ದಿಯನ್ನು ಪರಿಶೀಲಿಸಿ, ಪ್ರಮಾಣಿಸಿ, ನಿಖರವಾಗಿ ಅದನ್ನು ಜನರಿಗೆ ನೀಡಬೇಕಾಗಿರುವುದು ಪತ್ರಕರ್ತರ ಕರ್ತವ್ಯ. ಮಾಧ್ಯಮ ಸಮಾಜವನ್ನು ದಾರಿತಪ್ಪಿಸಬಹುದು, ಅದೇ ರೀತಿ ಸರಿದಾರಿಗೂ ಕೊಂಡೊಯ್ಯಬಹುದು. ಪತ್ರಕರ್ತರು ಸಮಾಜದ ಒಳಿತಿಗಾಗಿ ಕೆಲಸಮಾಡಬೇಕು ಎಂದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಎ. ಪೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಎ. ಈಶ್ವರಯ್ಯ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ, ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು ಇದ್ದರು.
ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ ಸ್ವಾಗತಿಸಿ, ಸದಸ್ಯೆ ಡಾ. ಯು.ಬಿ. ರಾಜಲಕ್ಷ್ಮೀ ವಂದಿಸಿದರು.
ಜಿ. ಪ್ರಭಾಕರ ತುಮರಿ ಅವರು ಕಾಮತ್ ಅವರನ್ನು ಪರಿಚಯಿಸಿದರು.
ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಪತ್ರಕರ್ತ ಕಿರಣ್ ಮಂಜನಬೈಲು ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಡಾ. ಪದ್ಮರಾಜ ದಂಡಾವತಿ ವರದಿಗಾರಿಕೆಯಲ್ಲಿ ಭಾಷೆಯ ಸೊಗಸು, ಸುಚೇತನಾ ನಾಯ್ಕ ಅವರು ನ್ಯಾಯಾಲಯ ವರದಿಗಾರಿಕೆ, ಟಿ.ಜಿ. ಶೆಟ್ಟಿ ಅವರು ಅಂತರ್ಜಾಲದಿಂದ ಲೇಖನಿಗೆ ಮಾಹಿತಿ ತಂತ್ರಜ್ಞಾನದ ಕೊಡುಗೆ ಹಾಗೂ ಆಸ್ಟ್ರೋ ಮೋಹನ್ ಅವರು ಸುದ್ದಿಚಿತ್ರಗಳಲ್ಲಿ ನೈಜತೆಯ ಹುಡುಕಾಟ ವಿಷಯದ ಕುರಿತು ಮಾಹಿತಿ ನೀಡಿದರು.
Advertisement