ಮಂಗಳೂರು: ರಾಜ್ಯದಲ್ಲಿ ಅವಕಾಶ ವಂಚಿತ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಕರ್ಣಾಟಕ ಬ್ಯಾಂಕ್ ಮತ್ತು ಪಿಎನ್‌ಬಿ ಮೆಟ್‌ಲೈಫ್ ವಿಮಾ ಕಂಪನಿ ಒಪ್ಪಂದ ಮಾಡಿಕೊಂಡಿವೆ. ಇವು ಎನ್‌ಜಿಒ ಸಂಸ್ಥೆಗಳಾದ ರಾಯಚೂರಿನ ಕ್ರೈ ಮತ್ತು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ಗೆ ನೆರವು ನೀಡಲಿದೆ.
ನಗರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಮತ್ತು ಏಷ್ಯಾ ಮೆಟ್‌ಲೈಫ್ ಇಂಕ್ ಅಧ್ಯಕ್ಷ ಕ್ರಿಸ್ಟೋಫರ್ ಟೌನ್ ಸೆಂಡ್ ಯೋಜನಾ ಪತ್ರ ಬಿಡುಗಡೆಗೊಳಿಸಿದರು.
ಪಿ.ಜಯರಾಮ ಭಟ್ ಮಾತನಾಡಿ, ಅವಕಾಶ ವಂಚಿತ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಕೈಗೊಂಡಿರುವ ಪ್ರಯತ್ನಕ್ಕೆ ಬೆಂಬಲವಿದೆ. ಸಮುದಾಯದ ಬದುಕಲ್ಲಿ ಬದಲಾವಣೆ ತರುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಕ್ರಿಸ್ಟೋಫರ್ ಟೌನ್‌ಸೆಂಡ್ ಮಾತನಾಡಿ, ಮೆಟ್‌ಲೈಫ್ ಅನೇಕ ಪ್ರಾಜೆಕ್ಟ್‌ಗಳಿಗೆ ಬೆಂಬಲ ನೀಡಿದ್ದು, ಕೆಬಿಎಲ್ ಜತೆ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಮ್ಮೆ ತಂದಿದೆ ಎಂದರು.
ಈ ಯೋಜನೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನಒಲಿಸುವುದು, ಮಕ್ಕಳ ಆರೋಗ್ಯ ರಕ್ಷಣೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸುವುದು. ಸುಮಾರು 12 ಸಾವಿರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಒದಗಿಸಲು ಈ ಸಂಸ್ಥೆಗಳು ಶ್ರಮಿಸಲಿದೆ.
ಕ್ರೈ ಸಂಸ್ಥೆ ರಾಯಚೂರಿನ 67 ಗ್ರಾಮಗಳಲ್ಲಿ ಮತ್ತು 18 ಕೊಳಚೆಗೇರಿಯಲ್ಲಿ 10,301 ಮಕ್ಕಳ ಉದ್ಧಾರಕ್ಕೆ ಶ್ರಮಿಸುತ್ತಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು 30 ನೋಂದಣಿ ಕೇಂದ್ರ ತೆರೆಯುತ್ತಿದೆ. ಶಾಲೆಯಿಂದ ಹೊರಗುಳಿದ 232 ಮಕ್ಕಳನ್ನು ಗುರುತಿಸಿದೆ. 111 ಪ್ರಾಥಮಿಕ ಶಾಲೆ ಮತ್ತು ಕನಿಷ್ಠ 2 ಉನ್ನತ ಪ್ರೌಢಶಾಲೆಗಳನ್ನು ಸಕ್ರಿಯಗೊಳಿಸುವುದು, ಮನೆಯಲ್ಲಿ ಶಿಕ್ಷಣ ಮುಂದುವರಿಸಲಾಗದ ಹೆಣ್ಮಕ್ಕಳಿಗೆ ವಿಶೇಷ ವಸತಿಗೃಹ ತೆರೆಯುವುದು, ಅಪೌಷ್ಟಿಕತೆ ಕಡಿಮೆ ಮಾಡುವುದು, ಮಕ್ಕಳು ಮತ್ತು ಗರ್ಭಿಣಿಯರಿಗೆ ಆರೋಗ್ಯ ಮತ್ತು ಅಪೌಷ್ಟಿಕತೆ ಶಿಬಿರ ಏರ್ಪಡಿಸಲಿದೆ.
ಪ್ರಜ್ಞಾ ಕೌನ್ಸಿಲಿಂಗ್ ಅವಿಭಜಿತ ದ.ಕ. ಜಿಲ್ಲೆಯಲ್ಲಿ 6 ವರ್ಷದವರೆಗಿನ ಮಕ್ಕಳಿಗೆ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಒದಗಿಸುವ ಕೆಲಸ ನಿರ್ವಹಿಸುತ್ತಿದೆ. ರಾಜೀವ್‌ಗಾಂಧಿ ಕ್ರೆಷ್ ಯೋಜನೆಯಲ್ಲಿ 30 ಕ್ರೆಷ್ ಕೇಂದ್ರಗಳ ಸುಮಾರು 750ಕ್ಕೂ ಅಧಿಕ ಮಕ್ಕಳ ನೋಂದಣಿ ಮಾಡಿದೆ. 750ಕ್ಕೂ ಅಧಿಕ ಬಡ ಮತ್ತು ಅಲಕ್ಷಿತ ಕುಟುಂಬಗಳಿಗೆ ನೆರವು ನೀಡಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರ, ವೈದ್ಯಕೀಯ ಆರೈಕೆ, ವಯಸ್ಸಿಗೆ ತಕ್ಕ ಆಟಿಕೆಗಳನ್ನು ಒದಗಿಸಲಿದೆ.
ಕೆಬಿಎಲ್ ಸಿಜಿಎಂ ಮಹಾಬಲೇಶ್ವರ, ಪಿಎಂಎಲ್‌ಐ ಎಂಡಿ ತರುಣ್ ಚುಗ್, ಕ್ರೈ ದಕ್ಷಿಣ ವಲಯ ನಿರ್ದೇಶಕಿ ಸುಮಾ ರವಿ, ಪ್ರಜ್ಞಾನ ಕೌನ್ಸಿಲಿಂಗ್ ಸೆಂಟರ್ ನಿರ್ದೇಶಕ ಪ್ರೊ.ಹಿಲ್ಡಾ ರಾಯಪ್ಪನ್ ಇದ್ದರು.
Advertisement