ಸುಬ್ರಹ್ಮಣ್ಯ: ಕಳೆದ ಗುರುವಾರದಿಂದ, ಸುಬ್ರಹ್ಮಣ್ಯವನ್ನು ಪ್ರಧಾನವಾಗಿ ಸಂಪರ್ಕಿಸುವ ಕುಮಾರಧಾರಾ ಸೇತುವೆ ಆಗಾಗ್ಗೆ ಜಲಾವೃತವಾಗುವ ಕಣ್ಣಾಮುಚ್ಚಾಲೆಯಾಟವಾಡುತ್ತಿದ್ದು ಯಾತ್ರಿಕರು, ವಿದ್ಯಾರ್ಥಿಗಳು, ನಿತ್ಯಸಂಚಾರಿಗಳಿಗೆ ತೊಂದರೆಯಾಗಿದೆ.
ಸೋಮವಾರ ಸಂಜೆ 5ನೇ ಬಾರಿಗೆ ದಿಢೀರನೆ ಮುಳುಗಿದ ಸೇತುವೆಯಿಂದಾಗಿ ಸೇತುವೆ ಎರಡೂ ದಡಗಳಲ್ಲಿ ನೂರಾರು ಮಂದಿ ಸಿಲುಕಿದ್ದರು.
ರಾತ್ರಿ 10.30ರ ವೇಳೆಗೆ ಸೇತುವೆ ವಾಹನ ಸಂಚಾರಕ್ಕೆ ತೆರವುಗೊಂಡರೂ ಮಂಗಳವಾರ ಮುಂಜಾನೆ 5ರ ವೇಳೆಗೆ ಮತ್ತೆ ಮುಳುಗಿ ಒಂದು ಗಂಟೆ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಸೇತುವೆ ಇಕ್ಕೆಲಗಳಲ್ಲಿದ್ದ ವಾಹನಗಳು ಸಾಗಿಬಂದವು. ಅದರೆ ಸುಬ್ರಹ್ಮಣ್ಯ ಪರಿಸರ ಹಾಗೂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೇತುವೆ ಪುನಃ 7.40ರ ವೇಳೆಗೆ ಸೇತುವೆ ಮೇಲೆ ನೀರು ಹರಿದು ಜನ ಹಾಗೂ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಪರಿಸ್ಥಿತಿಯನ್ನರಿತು ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಯಿತು. ಪದವಿ ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ ಮುಂದೂಡಲಾಯಿತು.
ಬೆಳಗ್ಗೆ 11 ಗಂಟೆಗೆ ಮತ್ತೆ ನದಿ ನೀರು ಸೇತುವೆಯಿಂದ ಇಳಿದು ವಾಹನ, ಜನಸಂಚಾರಕ್ಕೆ ತೆರವಾಯಿತು.
ಸೇತುವೆ ಮೇಲಿನ ನೀರು ಇಳಿದಾಕ್ಷಣ ಜನ ಸಾಲಾಗಿ ಸೇತುವೆ ದಾಟಿ ಬಂದರು. ಬಳಿಕ ವಾಹನಗಳೂ ಸಾಲುಗಟ್ಟಿ ಬಂದವು.
ಪಂಜ ಹೋಬಳಿ ಉಪತಹಸೀಲ್ದಾರ್ ಗಂಗಾಧರ್ ಹೆಗ್ಡೆ, ಸುಬ್ರಹ್ಮಣ್ಯ ಗ್ರಾಮಕರಣಿಕ ನಾಗಸುಂದರ, ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಸೇತುವೆ ಬಳಿ ಇದ್ದು ವಾಹನ ಸಂಚರಿಸದಂತೆ ತಡೆಬೇಲಿ ಹಾಕಿಸಿ, ಅಗತ್ಯ ಕ್ರಮ ಕೈಗೊಂಡರು.
ಗೃಹರಕ್ಷಕ ಸಿಬ್ಬಂದಿ ಆಹೋರಾತ್ರಿ ನದಿ ಕಾಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Advertisement