ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿ ಮಾಲೀಕನನ್ನು ಗ್ರಾಹಕರ ಸೇವೆಯಲ್ಲಿ ತೊಡಗಿಸುವಂತೆ ಮಾಡಿ, ಕ್ಯಾಶ್ ಕೌಂಟರ್‌ನಿಂದ ರು. 34 ಸಾವಿರಕ್ಕೂ ಹೆಚ್ಚಿನ ನಗದು, 25 ಸಾವಿರ ಮೌಲ್ಯದ ಮೊಬೈಲ್, 2 ಎಟಿಎಂ ಕಾರ್ಡ್‌ಗಳನ್ನು ಲಪಟಾಯಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ರಾಯಲ್ ಕಾಂಪ್ಲೆಕ್ಸ್‌ನಲ್ಲಿರುವ ಅಬ್ದುಲ್ ಮಜೀದ್ ಮಾಲೀಕತ್ವದ ಯು.ಕೆ. ಮೆಟಲ್ ಮಾರ್ಟ್ ಅಂಗಡಿಗೆ ಮಂಗಳವಾರ ಬೆಳಗ್ಗೆ 10.30 ರ ಸುಮಾರಿಗೆ 35- 40 ವರ್ಷದ, ನೋಡಲು ಗೌರವಾನ್ವಿತನಂತಿರುವ ವ್ಯಕ್ತಿಯೋರ್ವ ಗ್ರಾಹಕನಂತೆ ಬಂದು ರು. 300 ಬೆಲೆಯ ಪಾತ್ರೆಗಳನ್ನು ಆಯ್ಕೆ ಮಾಡಿದ್ದ. ಗ್ರಾಹಕರ ಅಭಿಷ್ಠೆಗೆ ಪೂರಕವಾಗಿ ಇನ್ನಷ್ಟು ಪಾತ್ರೆಗಳನ್ನು ತೋರಿಸುತ್ತಿದ್ದಂತೆಯೇ ಕೈ ಚಳಕ ತೋರಿದ.
ಗ್ರಾಹಕ ಅಂಗಡಿಯೊಳಗಿನ ಕ್ಯಾಶ್ ಬಾಕ್ಸ್ ತೆರೆದು ಅದರಲ್ಲಿರಿಸಿದ್ದ ರು. 34 ಸಾವಿರಕ್ಕೂ ಹೆಚ್ಚಿನ ಹಣವಿದ್ದ ಕಟ್ಟನ್ನು ಎಗರಿಸಿ, ಜೊತೆಗಿದ್ದ ರು. 25 ಸಾವಿರ ಬೆಲೆಯ ಮೊಬೈಲ್ ಮತ್ತು 2 ಸಿಮ್ ಕಾರ್ಡ್‌ಗಳ್ನು ಜೇಬಿಗಿಳಿಸಿದ್ದ.
ಬಳಿಕ ಆಯ್ಕೆ ಮಾಡಿರುವ ಪಾತ್ರೆಗಳನ್ನು ಪ್ಯಾಕ್ ಮಾಡಿ ಇಡಿ. ಪಕ್ಕದ ಅಂಗಡಿಗೆ ಹೋಗಿ ವಾಹನದೊಂದಿಗೆ ಬರುತ್ತೇನೆ ಎಂದು ಹೇಳಿ ಹೋಗಿರುತ್ತಾನೆ.
ಗ್ರಾಹಕನ ಆಯ್ಕೆಯ ಪಾತ್ರೆಗಳನ್ನು ಪ್ಯಾಕ್ ಮಾಡಿ, ಗ್ರಾಹಕನ ಬರುವಿಕೆಯನ್ನು ಕಾಯುತ್ತಿದ್ದ ಅಬ್ದುಲ್ ಮಜೀದ್ ಶಂಕೆ ಬಂದು ಕ್ಯಾಶ್ ಬಾಕ್ಸ್ ತೆರೆದು ನೋಡಿದಾಗ ಅದರಲ್ಲಿರಿಸಿದ್ದ ನಗದು ಹಣ, ಮೊಬೈಲ್, ಎಟಿಎಂ ಕಾರ್ಡ್ ನಾಪತ್ತೆಯಾಗಿರುವ ವಿಚಾರ ಗಮನಕ್ಕೆ ಬಂದಿತ್ತು. ಕೂಡಲೇ ಪೇಟೆಯಿಡಿ ಶಂಕಿತ ವಂಚಕನ ಹುಡುಕಾಟ ನಡೆಸಿದರಾದರೂ ವಂಚಕ ಪತ್ತೆಯಾಗಲಿಲ್ಲ. ಬಳಿಕ ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲಿಸರಿಗೆ ದೂರು ನೀಡಲಾಗಿದೆ.
Advertisement