ಮಂಗಳೂರು: ಯಾವುದೇ ಸರ್ಕಾರವೂ ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ, ಮಹಿಳೆಯರೇ ತಮ್ಮ ಸ್ವಂತ ಬಲದಲ್ಲಿಯೇ ರಕ್ಷಿಸಿಕೊಳ್ಳಬೇಕು ಎಂದು ಗುಲಾಬಿ ಗ್ಯಾಂಗ್ ಸಂಸ್ಥಾಪಕಿ ಸಂಪತ್‌ಪಾಲ್ ದೇವಿ ಹೇಳಿದ್ದಾರೆ.
ಮಂಗಲ್ಪಾಡಿ ನಾಮದೇವ ಶೆಣೈ ಸ್ಮರಣಾರ್ಥ ಟಿ.ವಿ.ರಮಣಪೈ ಹಾಲ್‌ನಲ್ಲಿ ಮಂಗಳವಾರ ವಿವೇಕ್ ಟ್ರೇಡರ್ಸ್ ಆಯೋಜಿಸಿದ ಸ್ತ್ರೀ ಆಪತ್ತು ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲಿ ಸ್ತ್ರೀಯರಿಗೆ ಶಿಕ್ಷಣ ಇರುತ್ತೊ ಅಲ್ಲಿ ಸಮಾನತೆ, ವಿಕಾಸ ಮತ್ತು ರಕ್ಷಣೆ ಇದೆ. ಎಲ್ಲಿ ಶಿಕ್ಷಣ ಇಲ್ಲವೋ ಅಲ್ಲಿ ಮಹಿಳೆಯರ ಜೀವನ ಕನಿಷ್ಠ ಮಟ್ಟದಲ್ಲಿರುತ್ತದೆ, ರಕ್ಷಣೆಯೂ ಇರುವುದಿಲ್ಲ. ಆದರೆ ದಕ್ಷಿಣ ಕನ್ನಡದಲ್ಲಿ ಮಹಿಳೆಯರು ಸುಶಿಕ್ಷಿತರು, ಸಮಾನರು ಮತ್ತು ಜಾಗರೂಕರಾಗಿದ್ದಾರೆ.
ನಮ್ಮ ಊರುಗಳಲ್ಲಿ ಮಹಿಳೆಯರಿಗೆ ಓದಿಸುವುದೇ ಕಡಿಮೆ. ನಾನು ಕಲಿತಿಲ್ಲ ಆದರೆ ಅನುಭವದಿಂದ ಪಾಠ ಕಲಿತು ಮಹಿಳೆಯರ ರಕ್ಷಣೆ ಮಾಡುತ್ತಿದ್ದೇವೆ. ಎಲ್ಲರನ್ನು ರಕ್ಷಿಸಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರೇ ನೀವು ನಿಷ್ಕ್ರಿಯರಾಗಬೇಡಿ, ನಿಮ್ಮ ದೌರ್ಜನ್ಯ ವಿರುದ್ಧ ದನಿ ಎತ್ತಿ ಎಂದರು.
ಕಟ್ಟುಪಾಡು ಕಿತ್ತುಹಾಕಿ: ಸಣ್ಣ ಪ್ರಾಯದಲ್ಲಿ ಮದುವೆ ಆಯಿತು. ಅತ್ತೆ ಮನೆಗೆ ಬಂದಾಗ ಕಿರುಕುಳ ಶುರುವಾಯಿತು. ಎಲ್ಲರ ಊಟ ಮಾಡಿದ ಬಳಿಕ ನಮಗೆ ಊಟ. ನಾನು ಮೊದಲು ವಿರೋಧಿಸಿ ಪತಿಗಿಂತ ಮೊದಲು ಊಟ ಮಾಡಲು ಶುರು ಮಾಡಿದೆ. ನಾಲ್ಕೈದು ಬಾರಿ ಜಗಳ ಮಾಡಿದ ಬಳಿಕ ಅತ್ತೆ ಸ್ವರ ಉಡುಗಿ ಹೋಯಿತು. ನೀವು ಇಂಥ ಕಟ್ಟುಪಾಡುಗಳನ್ನು ಕಿತ್ತು ಹಾಕಿ ಎಂದು ಕರೆ ನೀಡಿದರು.
ಪುರುಷರಿಗೆ ಜನ್ಮ ನೀಡುವವರು ನಾವೇ, ಸಂಸ್ಕಾರ ಕಲಿಸುವವರೂ ನಾವೇ. ನಮ್ಮ ಸಂಸ್ಕಾರ ಚೆನ್ನಾಗಿದ್ದರೆ ಪುರುಷರ ಸಂಸ್ಕಾರವೂ ಚೆನ್ನಾಗಿರುತ್ತದೆ ಎಂದರು.
ಪುಂಡಲೀಕ ಶೆಣೈ, ಕಾರ್ಯಕ್ರಮ ಸಂಘಟಕ ವಿವೇಕ್ ಟ್ರೇಡರ್ಸ್ ಮಾಲೀಕ ನರೇಶ್ ಶೆಣೈ ಇದ್ದರು.
ನಾಮಧೇಯ ಬಿಡುಗಡೆ: ಹೊಸದಿಂಗತ ಅಂಕಣಕಾರ ಸಂತೋಷ್ ತಮ್ಮಯ್ಯ ಮಂಗಲ್ಪಾಡಿ ನಾಮದೇವ ಶೆಣೈ ಕುರಿತ ಕೃತಿ 'ನಾಮಧೇಯ' ಕೃತಿ ಪುಂಡಲೀಕ ಶೆಣೈ ಬಿಡುಗಡೆ ಗೊಳಿಸಿದರು. ನಾಮದೇವ ಶೆಣೈ ಅವರ ಆತ್ಮ ಚರಿತ್ರೆ ಕೃತಿಯಲ್ಲಿ ಅಡಕವಾಗಿದೆ.
Advertisement