ಮಂಗಳೂರು: ಗುಲಾಬಿ ಗ್ಯಾಂಗ್‌ನಲ್ಲಿ 4 ಲಕ್ಷ ಮಂದಿ ಇದ್ದಾರೆ. ಪ್ರತಿ ಗ್ರಾಮಕ್ಕೆ ಒಬ್ಬರು ಕಮಾಂಡರ್ ಮಾಡುತ್ತೇವೆ. ಪ್ರತಿ ತಿಂಗಳು ಸಭೆ ಮಾಡುತ್ತೇವೆ. ಗುಲಾಬಿ ಗ್ಯಾಂಗ್ ಹೆಸರು ಹೇಳಿ ಮೋಸ ಮಾಡುತ್ತಿದ್ದವರನ್ನು ಹೊರಗೆ ಹಾಕುತ್ತೇವೆ. ಈ ರೀತಿ ನಾಲ್ಕು ಕಮಾಂಡರ್‌ಗಳನ್ನು ಕಿತ್ತು ಹಾಕಿದ್ದೇವೆ. ಕರ್ನಾಟಕದಲ್ಲಿಯೂ ಗ್ಯಾಂಗ್ ಸ್ಥಾಪನೆ ಬೇಡಿಕೆ ಇದೆ ಎಂದು ಗುಲಾಬ್ ಗ್ಯಾಂಗ್ ಸಂಸ್ಥಾಪಕಿ ಸಪಂತ್‌ಪಾಲ್ ದೇವಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಜತೆ ಸಂವಾದ ನಡೆಸಿದ ಸಂಪತ್‌ಪಾಲ್ ದೇವಿ, ಮಹಿಳೆಯರಲ್ಲಿ ಬದಲಾವಣೆಯಾದರೆ ದೇಶದ ಬದಲಾವಣೆ ಸಾಧ್ಯ. ಮಕ್ಕಳಿಗೆ ನೈತಿಕ ವಿಚಾರ ಬೋಧಿಸಬೇಕು. ಇದರಿಂದ ಮಾತ್ರ ಮಹಿಳೆ ಮೇಲಿನ ದೌರ್ಜನ್ಯ ಕಡಿಮೆಯಾದೀತು ಎಂದರು.
ಕಾನೂನು ಉಲ್ಲಂಘಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕೆ ನನ್ನ ಮೇಲೆ ಎರಡು ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಕೇಸ್ ಇದ್ದರೂ ವಿದೇಶಗಳಿಗೆ ಹೋಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಆದರೆ ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ನನ್ನ ಮೇಲೆ ಪ್ರಕರಣ ಇದೆ ಎಂಬ ಕಾರಣ ನೀಡಿ ನವೀಕರಿಸುತ್ತಿಲ್ಲ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇನೆ. ನಾನು ಮಹಿಳೆಯರ ಸಶಕ್ತೀಕರಣ ಮಾಡುತ್ತಿದ್ದೇನೆ. ಯಾರನ್ನೂ ಲೂಟಿ ಮಾಡುತ್ತಿಲ್ಲ. ಗುಲಾಬಿ ಗ್ಯಾಂಗ್ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದವನನ್ನು ನಾನು ಹೊರ ದಬ್ಬಿದ್ದೇನೆ.
ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜನ ಇದ್ದಲ್ಲಿ ರಾಜಕಾರಣ ಇದೆ. ಆದ್ದರಿಂದ ಗುಲಾಬಿ ಗ್ಯಾಂಗ್‌ನವರು ಜನರೇ ಆದ್ದರಿಂದಲೇ ನಾನು ರಾಜಕೀಯ ಸೇರಿದ್ದೇನೆ. ಸಮಾಜ ಬದಲಾಗದೆ ರಾಜಕೀಯ ಬದಲಾಗುವುದಿಲ್ಲ.
ಮಾಧುರಿ ದೀಕ್ಷಿತ್ ನಾಯಕಿಯಾಗಿ ನಟಿಸಿರುವ ಗುಲಾಬಿ ಗ್ಯಾಂಗ್ ಸಿನಿಮಾ ಕುರಿತು ಪ್ರಕರಣ ದಾಖಲಿಸಿದ್ದೇನೆ. ಅಲ್ಲಿ ನಾನು ಬಂದೂಕು ಹಿಡಿದಿರುವಂತೆ ತೋರಿಸಿದ್ದಾರೆ. ನಾನೆಲ್ಲೂ ಹಿಂಸಾತ್ಮಕವಾಗಿ ನಡೆದುಕೊಂಡಿಲ್ಲ. ಕೇವಲ ಬೆದರಿಕೆಗೆ ದೊಣ್ಣೆಗಳನ್ನು ಬಳಸಿದ್ದೇನೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ನನ್ನ ಗುಲಾಬ್ ಗ್ಯಾಂಗ್‌ನ ಚಿತ್ರಣ ಮಾಡಿದ್ದಾರೆ. ಕೋರ್ಟ್‌ನಲ್ಲಿ ಸಾಬೀತಾದರೆ ಅವರು ನನಗೆ ಪರಿಹಾರವನ್ನು ನೀಡಬೇಕಾಗುತ್ತದೆ ಎಂದರು.
Advertisement