ಮಂಗಳೂರು: ಗೋರಖ್‌ಸಿಂಗ್ ವರದಿ ಅನುಷ್ಠಾನಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ತೀರ್ಪು ವರೆಗೆ ಅಡಕೆ ರೈತರ ಸಾಲ ವಸೂಲಿಗೆ ಒತ್ತಡ ಹೇರದಂತೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳನ್ನು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಇದರ ಹೊರತೂ ಬಲಾತ್ಕಾರ ಸಾಲ ವಸೂಲಿಗೆ ಮುಂದಾದರೆ ಅಧಿಕಾರಿಗಳು ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಸಂತ್ರಸ್ತ ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗದೆ ಯಾವುದೇ ಅಹಿತಕರ ಘಟನೆಗೆ ಮುಂದಾಗಬಾರದು. ರಾಜ್ಯ ಸರ್ಕಾರದ ಸೂಚನೆಯಂತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸಾಲ ವಸೂಲಿಗೆ ರೈತರನ್ನು ಬಲಾತ್ಕರಿಸದೆ ಮುಂದೂಡುವಂತೆ ನಿರ್ಣಯಿಸಿದೆ. ಇದನ್ನು ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ ಎಂದು ಕಿಸಾನ್ ಖೇತ್ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಬಾರಿ ಅತಿವೃಷ್ಟಿಯಿಂದ ಶೇ.60ಕ್ಕಿಂತ ಜಾಸ್ತಿ ಅಡಕೆ ಕೊಳೆರೋಗದಿಂದ ನಾಶ ಹೊಂದಿತ್ತು. ಈ ಬಾರಿ ಕಳೆದ ಒಂದು ವಾರದಿಂದ ಭಾರಿ ಮಳೆಯಿಂದ ಕೊಳೆರೋಗ ಮರುಕಳಿಸಿದೆ. ಕಳೆದ 5 ವರ್ಷದಲ್ಲಿ ಕೊಳೆರೋಗ ಮತ್ತು ಹಳದಿ ಎಲೆರೋಗ ಬಾಧೆಗಳ ಹತೋಟಿಗೆ ಖಾಸಗಿ ಕಂಪನಿಗಳು ವಿವಿಧ ರೀತಿಯ ಶಿಲೀಂದ್ರ ಮತ್ತು ಕೀಟನಾಶಕ ಔಷಧವನ್ನು ಮಾರುಕಟ್ಟೆಗೆ ತಂದು ರೈತರನ್ನು ಉತ್ತೇಜಿಸುತ್ತಿವೆ. ಆದರೂ ಕೊಳೆರೋಗ ಹೆಚ್ಚುತ್ತಾ ಹೋದ್ದಲ್ಲದೆ ಹತೋಟಿಗೆ ಬಂದಿರಲಿಲ್ಲ. ಇಷ್ಟಾದರೂ ಸರ್ಕಾರ ಅಡಕೆ ಬೆಳೆಗಾರರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಡಕೆ ಸಂಬಂಧಿ ಇಲಾಖೆಗಳು ಹಾಗೂ ಸಂಶೋಧನಾ ಕೇಂದ್ರಗಳು ವೈಜ್ಞಾನಿಕವಾಗಿ ಯಾವುದೇ ಔಷಧ ಕಂಡುಹಿಡಿಯಲು ವಿಫಲವಾಗಿದೆ ಎಂದು ಆರೋಪಿಸಿದರು.
ರೈತ ಸಂಘ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಇದ್ದರು.
Advertisement