ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ದ.ಕ.ಜಿಲ್ಲೆಯ ಜನತೆ ವಿರೋಧಿಸುತ್ತಿಲ್ಲ ಎಂದು ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಈಗಲೂ ಜಿಲ್ಲೆಯ ಜನತೆ ಯೋಜನೆಗೆ ವಿರೋಧವಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ವಿರೋಧಿಸಿ ಆ.15 ಸ್ವಾತಂತ್ರ್ಯ ದಿನಾಚರಣೆಯಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ 'ನೇತ್ರಾವತಿ ತಿರುವು-ಸ್ವಾತಂತ್ರ್ಯದ ಕಳವು' ಹೆಸರಿನಲ್ಲಿ ಪ್ರತಿಭಟನೆ ನಡೆಸಲಿದೆ. ಆ.15ರಂದು ಸ್ವಾಂತ್ರ್ಯದ ದಿನವಾದರೂ ಜಿಲ್ಲೆಯ ಜನರ ಸ್ವಾತಂತ್ರ್ಯವನ್ನು ನೇತ್ರಾವತಿ ನದಿ ತಿರುವನ್ನು ಬೆಂಬಲಿಸುವ ಅಥವಾ ತಟಸ್ಥರಾಗುವ ಮೂಲಕ ಜಿಲ್ಲೆಯ ರಾಜಕಾರಣಿಗಳು ಕಸಿದುಕೊಂಡಿದ್ದಾರೆ. ಈ ಯೋಜನೆ ಕೈಬಿಟ್ಟಲ್ಲಿ ಮಾತ್ರ ಜಿಲ್ಲೆಯ ಜನರಿಗೆ ಸ್ವಾತಂತ್ರ್ಯ ಲಭ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಸಂಚಾಲಕ ದಿನೇಶ್ ಹೊಳ್ಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳ ಮೌನ: ಜಿಲ್ಲೆಯ ಶಾಸಕರು, ಸಚಿವರು, ಸಂಸದರು, ಮಠಾಧಿಪತಿಗಳು ಹೀಗೆ ಎಲ್ಲರೂ ನದಿ ತಿರುವು ಯೋಜನೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ ಜನತೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ನೇತ್ರಾವತಿ-ಹೇಮಾವತಿ ನದಿ ಜೋಡಣೆ ಪ್ರಸ್ತಾಪ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನೇತ್ರಾವತಿ-ಪಾಲಾರ್ ಜೋಡಣೆ ಬಗ್ಗೆ ಮಾತನಾಡಿದ್ದಾರೆ. ಯೋಜನೆ ಬಗ್ಗೆ ಜನಪ್ರತಿನಿಧಿಗಳು ಸ್ಪಷ್ಟನೆ ನೀಡಬೇಕು. ನೇತ್ರಾವತಿ ಉಳಿವಿಗೆ ಜಿಲ್ಲಾದ್ಯಂತ ದೊಡ್ಡ ಹೋರಾಟ ನಡೆಸುವುದಾಗಿ ಹೇಳಿದರು.
ಸದಸ್ಯರಾದ ಕಟೀಲು ದಿನೇಶ್ ಪೈ, ರಾಜೇಶ್ ದೇವಾಡಿಗ, ದಿನೇಶ್ ಕೊಡಿಯಾಲಬೈಲ್, ಸಪ್ನ ನರ್ಹೋನಾ ಇದ್ದರು.
Advertisement