ಸುಳ್ಯ: ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಬತ್ತದ ಬೇಸಾಯ ಸುಳ್ಯ ತಾಲೂಕಿನಲ್ಲಿ ಬೆರಳೆಣಿಕೆಯಲ್ಲಿ ಮಾತ್ರ ಕಾಣುತ್ತಿದೆ. ಆದರೆ, ಮುಂದಿನ ಜನಾಂಗದ ಮೂಲಕ ಪುನರಾಂಭಕ್ಕೆ ಸಾಕ್ಷಿಯಾಗಿ ಎನ್ನೆಂಸಿ ಕಾಲೇಜಿನ ಎನ್.ಎಸ್.ಎಸ್, ಘಟಕದ ನೇತೃತ್ವದಲ್ಲಿ ಬೂಡು ಭಗವತಿ ಕ್ಷೇತ್ರದ ದೇವರ ಗದ್ದೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಗದ್ದೆಗಿಳಿದರು. ಪ್ರಾರಂಭ ಹಂತದಲ್ಲಿ ಬೇಸಾಯದ ಮೊದಲ ಪಾಠವನ್ನು ಎನ್ನೆಂಸಿ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ಪೈರುಗಳನ್ನು ಕಿತ್ತು ನೆಡುವ ಪಾಠವನ್ನು ಬೋಧಿಸಲಾಯಿತು. ಜೊತೆಯಲ್ಲಿ ದೇವರ ಗದ್ದೆಯಲ್ಲಿ ನೇಜಿ ನೆಡುವ ಕಾಯಕದಲ್ಲಿ ನಿರತರಾಗಿದ್ದ ಅನುಭವಸ್ಥ ಮಹಿಳೆಯರು, ವಿವಿಧ ಸಂಘನೆಯ ಮುಖಂಡರು ಓ ಬೇಲೆ ಹಾಡು ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದರು.
ಪಾಠಶಾಲೆಯಾಗುತ್ತಿದೆ ದೇವರ ಗದ್ದೆ: ಕಳೆದ ವರ್ಷವೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿ ಬತ್ತ ಬೇಸಾಯವನ್ನು ಮಾಡಲಾಗಿತ್ತು.
ದೇವರ ಗದ್ದೆ ವರ್ಷ ವರ್ಷ ಬೇರೆ ಬೇರೆ ಸಂಘಟನೆಗಳ ಮೂಲಕ ಪ್ರಚಾರ ಪಡೆದು, ಮುಂದಿನ ಜನಾಂಗದ ಪಾಠ ಶಾಲೆಯಾಗಿಯೂ ಬೆಳೆಯುತ್ತಿದೆ.
ಕ್ರೀಡಾಕೂಟವನ್ನು ಅರಂತೋಡು ಪ.ಪೂ. ಕಾಲೇಜು ದೈ.ಶಿ.ಶಿ. ಎ.ಸಿ. ವಸಂತ ಉದ್ಘಾಟಿಸಿದರು. ಎನ್.ಎಸ್.ಎಸ್. ಘಟಕದ ಅಧಿಕಾರಿಗಳಾದ ಸಂಜೀವ ಕುದ್ಪಾಜೆ, ಭಾಗ್ಯಶ್ರೀ, ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಬೂಡು ಕಾರ್ಯಕ್ರಮ ನಡೆಸಿಕೊಟ್ಟರು. ರಮೇಶ್ ಶೆಟ್ಟಿ ಕಾಸರಗೋಡು, ನಿತ್ಯಾನಂದ ಕುದ್ಪಾಜೆ, ಭಗವತಿ ಯುವಸೇವಾ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಸಹಕರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ..: ಎನ್ನೆಂಸಿ ಎನ್.ಎಸ್.ಎಸ್ ಒಂದು ದಿನದ ಶಿಬಿರಕ್ಕೆ ಚೆನ್ನಕೇಶವ ದೇವಳದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ಚಾಲನೆ ನೀಡಿದರು. ಭಗವತಿ ಯುವಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ, ಎನ್ನೆಂಸಿ ನಿವೃತ್ತ ಪ್ರಾಂಶುಪಾಲ ಪ್ರಭಾಕರ ಶಿಶಿಲ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಎನ್ನೆಂಸಿ ಪ್ರಾಂಶುಪಾಲೆ ಯಶೋಧ ರಾಮಚಂದ್ರ ವಹಿಸಿದರು. ಘಟಕದ ಅಧಿಕಾರಿ ಸಂಜೀವ ಕುದ್ಪಾಜೆ, ಭಾಗ್ಯಶ್ರೀ ಇದ್ದರು.
Advertisement