ಬೆಳ್ತಂಗಡಿ: ಸರ್ಕಾರಿ ಮತ್ತು ಖಾಸಗಿ ಬಸ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಬೆಳ್ತಂಗಡಿ ಬಸ್ ನಿಲ್ದಾಣಗೊಳಗೆ ಪ್ರವೇಶ ಕಡ್ಡಾಯವಾಗಿ ನಿಷೇಧಿಸಲು ಇಲ್ಲಿನ ನ.ಪಂ.ಆಡಳಿತ ನಿರ್ಧರಿಸಿದೆ.
ಇತ್ತೀಚೆಗೆ ಅಧ್ಯಕ್ಷೆ ಮುಸ್ತಾರ್ ಜಾನ್ ಮೆಹಬೂಬ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯ ಬಗ್ಗೆ ಸದಸ್ಯರು ಗಮನ ಸೆಳೆದು ನಿಲ್ದಾಣವನ್ನು ಬಸ್‌ಗಳಿಗೆ ಮಾತ್ರ ಮೀಸಲಿಡುವಂತೆ ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು ನಿಲ್ದಾಣದೊಳಗೆ ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧಿಸಲು ನಿರ್ಧರಿಸಲಾಯಿತು. ಅಲ್ಲದೆ 5 ಕಡೆಗಳಲ್ಲಿ ಸೂಚನಾ ಫಲಕ ಹಾಗೂ 3 ಕಡೆಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಯಿತು.
ಇದನ್ನು ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ ಸಹಕಾರ ಪಡೆಯಲು ನಿರ್ಧರಿಸಲಾಯಿತು.
ಅಪಾಯಕಾರಿ ಮರ ತೆರವು: ನಗರದಲ್ಲಿರುವ ಅಪಾಯಕಾರಿ ಮರಗಳನ್ನು ಕಡಿಯುವಂತೆ ಅರಣ್ಯ ಇಲಾಖಾಧಿಕಾರಿಗೆ ಸೂಚಿಸಲಾಯಿತು. ಅದರಲ್ಲೂ ಮುಖ್ಯವಾಗಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಹಿಂಬದಿ ಇರುವ ಬೃಹತ್ ಮರಗಳ ಬಗ್ಗೆ ಗಮನಹರಿಸುವಂತೆ ಸೂಚಿಸಲಾಯಿತು. ಶವಾಗಾರದ ಸ್ವಚ್ಛತೆ ಬಗ್ಗೆ ಮತ್ತು ಸುದೆಮುಗೇರು-ಸಂಜಯನಗರದಲ್ಲಿನ ಪೈಪ್ ಲೈನ್‌ನಿಂದಾಗಿ ಮಳೆ ನೀರು ರಸ್ತೆಗೆ ಹರಿದುಬರುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ನಿರ್ಧರಿಸಲಾಯಿತು.
ಮುಖ್ಯಾಧಿಕಾರಿ ಜೆಸಿಂತಾ ಮೋನಿಸ್, ಉಪಾಧ್ಯಕ್ಷ ನಳಿನಿ ವಿಶ್ವನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಎಂಜಿನಿಯರ್ ಮಹಾವೀರ, ನಾಮನಿರ್ದೇಶಿತ ಸದಸ್ಯರು ಇದ್ದರು.
Advertisement