ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದಾಧಿಕಾರಿ, ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಕೂಡಲೇ ಸಂಬಂಧ ಪಟ್ಟ ಇಲಾಖೆಯ ಮೇಲಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಯನ್ನು ನಿಯೋಜಿಸಬೇಕು. ಇಲ್ಲದಿದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎ. ಉಸ್ಮಾನ್ ಮತ್ತು ಸದಸ್ಯರು ಎಚ್ಚರಿಸಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಯವರು ಹೆಚ್ಚಿನ ತರಬೇತಿಗಾಗಿ ತೆರಳಿದ್ದು, ತೆರವಾದ ಸ್ಥಾನಕ್ಕೆ ಕಾಯಂ ವೈದ್ಯರನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ. ವೈದ್ಯಾಧಿಕಾರಿಗಳು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ರೋಗಿಗಳು ಸಣ್ಣಪುಟ್ಟ ಕಾಯಿಲೆಗಳಿಗೂ ದೂರದ ಕುಶಾಲನಗರ ಮಡಿಕೇರಿಗೆ ತೆರಳಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿಯೇ ಸುಂಟಿಕೊಪ್ಪವು ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಸುಮಾರು 7 ಕ್ಕೂ ಮಿಕ್ಕಿ ಗ್ರಾಮ ಪಂಚಾಯಿತಿಯ ಬಡ ಕೂಲಿಕಾರ್ಮಿಕ ಜನತೆಯು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಭಿತರಾಗಿದ್ದಾರೆ. ಸುಂಟಿಕೊಪ್ಪದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿಕೊಂಡಿದೆ. ಪಟ್ಟಣದ ನಡುವೆ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ಆಗಿಂದಾಗೆ ಅವಘಡಗಳು ಸಂಭವಿಸುತ್ತಿದೆ. ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಸಾವು ಸಂಭವಿಸಿದ್ದಿದೆ ಎಂದು ತಿಳಿಸಿದರು.
ಕೋಟ್ಯಂತರ ರು. ಹಣ ವ್ಯಯಿಸಿ ಸುಸಜಿತ ಕಟ್ಟಡ ನಿರ್ಮಾಣಗೊಂಡಿದೆ. ಆದರೆ, ಕಟ್ಟಡಕ್ಕೆ ಅನುಗುಣವಾಗಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ರಾತ್ರಿ ವೇಳೆ ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹತ್ತಾರು ಕಿ.ಮೀ. ದೂರದಿಂದ ಖಾಸಗಿ ವಾಹನಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ದೊರೆಯದೆ ಮತ್ತೆ ಜಿಲ್ಲಾಸ್ಪತ್ರೆಗೆ ತುರ್ತು ವಾಹನದ ಮೂಲಕ ಕಳುಹಿಲಾಗುತ್ತಿದೆ. ಸುಂಟಿಕೊಪ್ಪದ ಜನಪ್ರತಿನಿಧಿಗಳು ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆಯ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಕೂಡಲೇ ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು 15 ದಿನದೊಳಗೆ ಕಾಯಂ ವೈದ್ಯರು, ಸಿಬ್ಬಂದಿಯನ್ನು ನೇಮಕಗೊಳಿಸದಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಸಾರ್ವಜನಿಕ ಮತ್ತು ಸಂಘ ಸಂಸ್ಥೆಗಳ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಪಿ.ಆರ್. ಸುಕುಮಾರ್, ಕೆ.ಇ. ಕರೀಂ, ರೋಸ್‌ಮೇರಿ ರಾಡ್ರಿಗಸ್, ನಿರ್ಮಲ ಶೇಷಪ್ಪ, ಸುನೀತ ಶೇಖರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಸಂಶುದ್ದೀನ್ ಇದ್ದರು.
Advertisement