ಮಂಗಳೂರು: ಮಳೆಯ ಅಬ್ಬರ ಕಡಿಮೆಯಾಗಿದೆ. ಬೆಳಗ್ಗೆ ಧಾರಾಕಾರವಾಗಿ ಸುರಿದ ಮಳೆ ಮಧ್ಯಾಹ್ನ ನಂತರ ಕಡಿಮೆಯಾಗಿತ್ತು. ಮೋಡ ಕವಿದ ವಾತಾವರಣವಿತ್ತು. ನೇತ್ರಾವತಿ ತಟದ ಬಳಿಯಿರುವ ಕುದ್ರುವಿನಲ್ಲಿ ಬೆಳಗ್ಗೆ ನೆರೆ ಕಾಣಿಸಿದ್ದು, ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕ್ರಮೇಣ ನೀರು ಇಳಿಕೆಯಾಗಿದೆ.
ಮಳೆಯ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲವು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸುಳ್ಯದ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಸುಳ್ಯ ವ್ಯಾಪ್ತಿಯ 4 ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯ ಬಂಟ್ವಾಳದಲ್ಲಿ 135 ಮಿ.ಮೀ. ಗರಿಷ್ಠ ಮಳೆ ಸುರಿದಿದೆ. ಉಳ್ಳಾಲದಲ್ಲಿ ತೀವ್ರಗೊಂಡಿದ್ದ ಕಡಲ್ಕೊರೆತ ಕಡಿಮೆಯಾಗುತ್ತಿದೆ.
ಮಳೆ ಪ್ರಮಾಣ: ಬೆಳ್ತಂಗಡಿ- 114.6 ಮಿ.ಮೀ., ಮಂಗಳೂರು- 101 ಮಿ.ಮೀ., ಮೂಡುಬಿದಿರೆ- 104 ಮಿ.ಮೀ., ಸುಳ್ಯ- 98.2 ಮಿ.ಮೀ., ಪುತ್ತೂರು- 72 ಮಿ.ಮೀ., ಕಡಬ- 64.3 ಮಿ.ಮೀ. ಮಳೆ ದಾಖಲಾಗಿದೆ.
ಮಳೆಗೆ ಇಬ್ಬರು ಬಾಲಕರು ಬಲಿ
ಉಡುಪಿ: ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದಲ್ಲಿ ಸೋಮವಾರ ಸುರಿದ ಮಳೆಗೆ 11 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಮೃತ ಅಭಿಷೇಕ್ ಇಲ್ಲಿನ ಜನತಾ ಕಾಲನಿಯ ನಿವಾಸಿ ನೇತ್ರಾವತಿ ಎಂಬವರ ಅಣ್ಣನ ಮಗ. ಸೋಮವಾರ ವಿಪರೀತ ಮಳೆಯ ಕಾರಣ ಶಾಲೆಗೆ ಹೋಗದೆ ಮನೆಯಲ್ಲಿ ಉಳಿದುಕೊಂಡಿದ್ದ. ಮಧ್ಯಾಹ್ನ 2 ಗಂಟೆಗೆ ಆಟವಾಡುತ್ತಾ ಮನೆ ಹಿಂದಿರುವ ಮಳೆ ನೀರು ತುಂಬಿದ್ದ ಹೊಂಡಕ್ಕೆ ಕಾಲು ಜಾರಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಭಾನುವಾರ ಸಂಜೆ ಕೋಡಿಬೆಂಗ್ರೆ ಗ್ರಾಮದ ಹೂಡೆಯಲ್ಲಿ ಬಾಲಕನೊಬ್ಬ ಮಳೆ ನೀರಿನಿಂದ ತುಂಬಿದ್ದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಸಿಹಾಲ್ (8), ಮನೆಯ ಬಳಿ ಒಬ್ಬನೇ ಆಟವಾಡುತ್ತಿದ್ದಾಗ ಚೆಂಡು ಆವರಣ ಇಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.