ಇನ್ನೂ ಬಾರದ ಭದ್ರೆ

Updated on: 

ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಭದ್ರಾ ಡ್ಯಾಂ ನೀರು ಎಲ್ಲಿಗೆ ಬಂತಂತ್ತೆ. ಹರಿಹರ ಬಳಿ ಇದೆಯಂತೆ.. ಸಾರಥಿಗೆ ಬಂದಿದೆಯಂತೆ..  ಕಡತಿ ಬಳಿ ಬಂದಿದೆಯಂತೆ..  ಗರ್ಭಗುಡಿ ಬಳಿ ಯಾವಾಗ ಬರತ್ತದೆಯಂತೆ.. ಇನ್ನೂ ಎರಡು -ಮೂರು ದಿವಸವಂತೆ..  ನಮ್ಮ ವಾರ್ಡ್‌ಗೆ ಟ್ಯಾಂಕ್ ಕಳಿಸಿ. ಕುಡಿಯಲಿಕ್ಕೆ ನೀರಿಲ್ಲ..
ಈ ರೀತಿ ಮಾತುಗಳು ಪಟ್ಟಣದಲ್ಲಿ ದಿನ ನಿತ್ಯ ಜನರ ಬಾಯಲ್ಲಿ ಹರಿದಾಡುತ್ತಿವೆ. ತುಂಗ-ಭದ್ರ ನದಿ ಬರಿದಾಗಿದ್ದು, ನದಿಯಿಂದ ಅಂದಾಜು 30 ಕಿಲೊ ಮೀಟರ್ ದೂರ ಹರಪನಹಳ್ಳಿ  ಪಟ್ಟಣಕ್ಕೆ  ಸರಬರಾಜಾಗುತ್ತಿದ್ದ ಕುಡಿಯುವ ನೀರು ಸ್ಥಗಿತಗೊಂಡು ಅನೇಕ ದಿನಗಳೇ ಕಳೆದಿವೆ. ಈಗ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ.
ತುಂಗ -ಭದ್ರ ನದಿ ಬತ್ತಿರುವುರಿಂದ ಜನತೆಯ ಒತ್ತಾಯದ ಮೇರೆಗೆ   ಕುಡಿಯುವ ನೀರಿಗಾಗಿ  ಶಿವಮೊಗ್ಗ ಬಳಿಯ ಭದ್ರ ಡ್ಯಾಂ ನಿಂದ ನೀರನ್ನು ನದಿಗೆ ಬಿಡಲಾಗಿದೆ ಎಂದ 4-5 ದಿನಗಳಿಂದ ಹೇಳಲಾಗುತ್ತಿದೆ, ಆ ನೀರು ಹರಪನಹಳ್ಳಿ ಪಟ್ಟಣಕ್ಕೆ ನೀರು ಒದಗಿಸುವ ಜಾಕ್ ವೆಲ್ ಇರುವ ಗರ್ಭಗುಡಿ ಬಳಿ ನದಿಗೆ ಇನ್ನೂ ಬಂದಿಲ್ಲ. ಹರಿಹರ ಬಳಿ, ಕಡತಿ ಬಳಿ ಬಂದಿದೆಯಂತೆ ಎಂದು  ಅಧಿಕಾರಿಗಳು ತಿಳಿಸಿ ತಮ್ಮ ಅಸಾಯಕತೆ ವ್ಯಕ್ತಪಡಿಸುತ್ತಾರೆ.
ಈ ಕುರಿತು ಪರಿಸ್ಥಿತಿ ವೀಕ್ಷಿಸಲು ಪುರಸಭಾದ್ಯಕ್ಷ ಬಿ. ಮಹಬೂಬ್ ಸಾಹೇಬ್ ಮುಖ್ಯಾಧಿಕಾರಿ ನಾಗಲಾಪುರ, ಎಂಜಿನಿಯರ ದೇವರಾಜ  ಹಾಗೂ ಜಿ.ಪಂ ಇಂಜಿನಿಯರಿಂಗ್ ಅಧಿಕಾರಿಗಳು ಗರ್ಭಗುಡಿ ಗ್ರಾಮದ ಬಳಿ ತುಂಗ-ಭದ್ರ ನದಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಭದ್ರ ನೀರು ಇನ್ನೂ ಕಡತಿ ಗ್ರಾಮದ ಬಳಿ ಇದೆಯಂತೆ, ನಮ್ಮಲ್ಲಿಗೆ ಬರಲು ಇನ್ನೂ 2-3 ದಿವಸ ವಾಗುತ್ತದೆ, ನದಿಯಲ್ಲಿ ಒಡ್ಡನ್ನಾದರೂ ಕಟ್ಟಿಸಲು ಯೋಚನೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
10ಕೈ ಪಂಪು ದುರಸ್ತಿ: ಪಟ್ಟಣದಲ್ಲಿ 32 ಕೈ ಪಂಪು ಗಳಿವೆ, ಅದರಲ್ಲಿ 10 ದುರಸ್ತಿ ಮಾಡಲಾಗಿದೆ, ಉಳಿದವುಗಳನ್ನು ರಿಪೇರಿ ಮಾಡಲಾಗುತ್ತೆ, ನಾಲ್ಕು ಟ್ಯಾಂಕ್‌ಗಳಿಂದ ನೀರನ್ನು ಜನರಿಗೆ ಸರಬರಾಜು ಮಾಡಲಾಗುತ್ತೆ ಹಾಗೂ ಅಂದಾಜು 6 ಕೊಳವೆ ಬಾವಿಗಳಿಂದ ಆದಷ್ಟು ನೀರನ್ನು  ಒದಗಿಸಲಾಗುತ್ತೆ ಎಂದು ಮುಖ್ಯಾಧಿಕಾರಿ ನಾಗಲಾಪುರ ತಿಳಿಸುತ್ತಾರೆ.  ಅನೇಕ ಮಹಿಳೆಯರು ನಮ್ಮ ಓಣಿಗೆ ನೀರು ಕಳಿಸಿ ಎಂದು  ಶನಿವಾರ ಸಹ   ಪುರಸಭಾ ಕಚೇರಿಗೆ ಆಗಮಿಸಿ ಅಳಲು ತೋಡಿಕೊಂಡರು.
ಅಗ್ನಿ ಶಾಮಕ ದಳಕ್ಕೆ ನೀರಿಲ್ಲ: ಬೆಂಕಿ ನಂದಿಸುವ ಅಗ್ನಿ ಶಾಮಕದಳ ವಾಹನಗಳಿಗೆ ನೀರಿನ ಸಮಸ್ಯೆಯಾಗಿದ್ದು, ಅವರೂ ಸಹ ಚಿಂತೆಗೀಡಾಗಿದ್ದಾರೆ. ನೀರಿಗಾಗಿ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ದೊಡ್ಡಯ್ಯ  ಪ್ರತಿ ದಿನ ಅಲೆಯುತ್ತಿದ್ದಾರೆ. ಬೇಸಿಗೆಯಲ್ಲಿ ಅಲ್ಲಲ್ಲಿ ಬೆಂಕಿ ದುರಂತ ಜಾಸ್ತಿ. ತುರ್ತು ಸೇವೆಯ ಇಂತಹ ಇಲಾಖೆಗೆ ನೀರಿನ ಸಮಸ್ಯೆ ತಲೆದೋರಿದೆ. ಅಂದಾಜು 50 ಸಾವಿರ ಜನತೆ ಇರುವ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ.
ವಿದ್ಯುತ್ ಸಮಸ್ಯೆ: ನೀರಿನ ಸಮಸ್ಯೆ ಜೊತೆ ವಿದ್ಯುತ್ ಸಮಸ್ಯೆ ತಲೆದೋರಿದೆ, ಪಟ್ಟಣದಲ್ಲಿ ಬೆಳಿಗ್ಗೆ 2 ತಾಸು, ರಾತ್ರಿ 2 ತಾಸು ಒಟ್ಟು 4 ತಾಸು  ಹಾಗೂ ಗ್ರಾಮೀಣ ಭಾಗದಲ್ಲಿ ಬೆಳಿಗ್ಗೆ 2 ತಾಸು ಹಾಗೂ ರಾತ್ರಿ 3 ತಾಸು ಒಟ್ಟು 5 ತಾಸು ವಿದ್ಯುತ್ ನಿಲುಗಡೆಗೆ ಆದೇಶ ಬಂದಿದೆ ಎಂದು ಬೆಸ್ಕಾಂ ಎಇಇ ಜಯಪ್ಪ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೂಲಭೂತ ಸೌಕರ್ಯ ಗಳಾದ ನೀರು ಹಾಗೂ ವಿದ್ಯುತ್  ತೀವ್ರ ಸಮಸ್ಯೆ  ಉಂಟಾಗಿದ್ದು, ಜನವರಿ, ಫೆಬ್ರವರಿಯಲ್ಲಿಯೇ ಈ ರೀತಿಯಾದರೆ  ಮಾರ್ಚ್- ಎಪ್ರಿಲ್ ಹೇಗೆ ಎಂಬ ಚಿಂತೆಯಲ್ಲಿ ಜನತೆ ಕಾಲ ತಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com