ಹರಿಹರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.4ರಂದು 'ಪ್ರಾಚ್ಯ ವಸ್ತುಗಳ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ' ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12-30ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲೇಖಕ ಎಸ್. ಮಂಜುನಾಥ ಉಪನ್ಯಾಸ ನೀಡಲಿದ್ದಾರೆ. ಪ್ರಾಂಶುಪಾಲ ಡಿ. ಮುದ್ದುರಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎನ್ನೆಸ್ಸೆಸ್ ಶಿಬಿರ ಸಮಾರೋಪ
ನ್ಯಾಮತಿ: ಸಮಾಜದಲ್ಲಿ ಮಾನವೀಯ ಗುಣಗಳು ಕಣ್ಮರೆಯಾಗುತ್ತಿದ್ದು, ಇದನ್ನು ಉಳಿಸಿ, ಬೆಳೆಸುವಲ್ಲಿ ಶಿಬಿರಾರ್ಥಿಗಳು ಶ್ರಮವಹಿಸಬೇಕು ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಗೌಡರ ಶಿವಣ್ಣನವರು ಹೇಳಿದರು. ಇಲ್ಲಿಗೆ ಸಮೀಪ ಕೊಡಚಗೊಂಡನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿ, ಶ್ರಮ ಸಾರ್ಥಕವೆನಿಸಬೇಕು. ಶಿಸ್ತು ಜೀವನದ ಬದುಕಿಗೆ ಶಿಕ್ಷಣ ನೀಡುತ್ತದೆ ಎಂದರು. ಸಿ.ಎನ್. ಚಂದ್ರಶೇಖರಪ್ಪ, ಇ. ಪ್ರಭಾಕರ, ಡಾ.ಬಿ.ವಿ. ವೀರಪ್ಪ, ಎಚ್. ಶಿವಾನಂದಪ್ಪ ಮಾತನಾಡಿದರು.